ADVERTISEMENT

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಒಂದು ಹುದ್ದೆಗೆ ಇಬ್ಬರ ನೇಮಕ

ಉಪನಿರ್ದೇಶಕರ ಹುದ್ದೆಗೆ ಕಿತ್ತಾಟ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 4:56 IST
Last Updated 17 ಡಿಸೆಂಬರ್ 2022, 4:56 IST
   

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ವರ್ಗಾವಣೆ ಗೊಂದಲ ಸೃಷ್ಟಿಸಿದೆ.

ಇಬ್ಬರು ಅಧಿಕಾರಿಗಳ ನಡುವೆ ಈ ಹುದ್ದೆಗೆ ಕಿತ್ತಾಟ ಆರಂಭವಾಗಿದ್ದು, ನ್ಯಾಯಾಲಯದ ಮೊರೆ ಹೋಗಿದ್ದಾರೆ.

ನಗರದ ವಿಶ್ವೇಶ್ವರ ಗೋಪುರದಲ್ಲಿ ಕಚೇರಿ ಹೊಂದಿರುವ ಅಂಗವಿಕಲ ಹಾಗೂ ಹಿರಿಯ ನಾಗರಿಕ ಸಬಲೀಕರಣ ನಿರ್ದೇಶನಾಲಯದ ಉಪನಿರ್ದೇಶಕ ಡಾ.ಎಸ್‌. ಸಿದ್ದರಾಮಣ್ಣ ಅವರನ್ನು ಬೆಂಗಳೂರು ನಗರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಹುದ್ದೆಗೆ ಡಿ.14ರಂದು ವರ್ಗಾವಣೆ ಮಾಡಲಾಗಿತ್ತು.

ADVERTISEMENT

ಈ ಹುದ್ದೆಯಲ್ಲಿದ್ದ ಬಿ.ಎಚ್‌. ನಿಶ್ಚಲ್‌ ಅವರನ್ನು ಡಾ. ಸಿದ್ದರಾಮಣ್ಣ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು, ಚುನಾವಣಾ ಕಾರ್ಯದಲ್ಲಿ ತೊಡಗಿರುವ ನಿಶ್ಚಲ್‌ ಅವರ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡುವಂತೆ ಕೋರಿದ್ದಾರೆ.

ಸರ್ಕಾರವೇ ಮಾಡಿರುವ ವರ್ಗಾವಣೆಗೆ ಜಿಲ್ಲಾಧಿಕಾರಿ ಅವರ ಪತ್ರವೂ ಗೊಂದಲ ಸೃಷ್ಟಿಸಿದೆ. ಜತೆಗೆ ಕರ್ತವ್ಯ ನಿರ್ವಹಿಸಲು ಇಬ್ಬರೂ ಬರುತ್ತಿರುವುದರಿಂದ ಕಚೇರಿಯ ವಾತಾವರಣವೂ ಬಿಗಡಾಯಿಸಿದೆ.

ಪತ್ರದಲ್ಲಿ ಏನಿದೆ?: ನಿಶ್ಚಲ್‌ ಅವರನ್ನು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮತಪಟ್ಟಿ ಪರಿಷ್ಕರಣೆ ಹಾಗೂ ಆಧಾರ್‌ ಜೋಡಣೆ ಸಂಬಂಧ ಈಗಾಗಲೇ ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ನೀಡಿರುವ ನಿರ್ದೇಶನದ ಅನ್ವಯ ವರ್ಗಾವಣೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಪತ್ರದಲ್ಲಿ ಉಲ್ಲೇಖಿಸಿದ್ದರು.

‘ಮತಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳನ್ನು ಅಂತಿಮ ಪಟ್ಟಿ ಪ್ರಕಟಿಸಿದ ಬಳಿಕ ಮುಖ್ಯ ಚುನಾವಣಾ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರವೇ ವರ್ಗಾವಣೆ ಮಾಡಬೇಕು. ತುರ್ತು ಕಾರಣಗಳಿಗಾಗಿ ವರ್ಗಾವಣೆ ಅಗತ್ಯವಿದ್ದರೆ ಆಯೋಗದ ಅನುಮೋದನೆ ಪಡೆಯಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಹೀಗಾಗಿ, ಮತಪಟ್ಟಿ ಪರಿಷ್ಕರಣೆ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಬಿ.ಎಚ್‌.ನಿಶ್ಚಲ್‌ ಅವರನ್ನು ಮತಪಟ್ಟಿ ಪರಿಷ್ಕರಣೆ ಕಾರ್ಯ ಮುಗಿದು ಅಂತಿಮ ಪಟ್ಟಿ ಪ್ರಕಟಿಸುವವರೆಗೂ ಈಗಿರುವ ಹುದ್ದೆಯಿಂದ ಬಿಡುಗಡೆ ಮಾಡಲು ಪ್ರಸ್ತುತ ಅವಕಾಶ ಇಲ್ಲ. ಹೀಗಾಗಿ, ವರ್ಗಾವಣೆಯಾಗಿರುವ ಎಸ್‌. ಸಿದ್ದರಾಮಣ್ಣ ಅವರನ್ನು ಸ್ಥಳ ನಿಯುಕ್ತಿಗಾಗಿ ವಾಪಸ್‌ ಕಳುಹಿಸಲಾಗಿದೆ’ ಎಂದು ವಿವರಿಸಿದ್ದರು.

ಈ ಸಂಬಂಧ ಜಿಲ್ಲಾಧಿಕಾರಿ ಸಂಗಪ್ಪ ಅವರನ್ನು ಸಂಪರ್ಕಿಸಿ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ. ಈಗ ನಿಶ್ಚಲ್‌ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಕೆಎಟಿ) ವರ್ಗಾವಣೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ, ಸಿದ್ದರಾಮಣ್ಣ ಅವರು ಕೆವಿಯಟ್‌ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಕೆಎಟಿ ಡಿ.19ಕ್ಕೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.