ADVERTISEMENT

‘ಅದೃಷ್ಟದ ಬಂಗಲೆ’ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರವೇಶ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 15:42 IST
Last Updated 10 ಜೂನ್ 2024, 15:42 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌   

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ‘ಅದೃಷ್ಟದ ಬಂಗಲೆ’ ಎಂದೇ ಖ್ಯಾತಿ ಪಡೆದಿರುವ ಕುಮಾರ ಪಾರ್ಕ್‌ನ 01 ಸಂಖ್ಯೆಯ ಸರ್ಕಾರಿ ಮನೆ ಪ್ರವೇಶಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆದಿದೆ. ಆರಂಭದಲ್ಲೇ ಶಿವಕುಮಾರ್‌ ಅವರಿಗೆ ಕುಮಾರ ಪಾರ್ಕ್‌ ಪೂರ್ವದಲ್ಲಿ ರೈಲ್ವೆ ಹಳಿ ಪಕ್ಕದಲ್ಲೇ ಇರುವ 01ನೇ ಸಂಖ್ಯೆಯ ಬಂಗಲೆಯನ್ನು ಹಂಚಿಕೆ ಮಾಡಲಾಗಿತ್ತು. ಒಂದು ವರ್ಷದಿಂದ ಅಲ್ಲಿಗೆ ಕಾಲಿಡದೇ ಇದ್ದ ಅವರು, ಸೋಮವಾರ ಬಂಗಲೆ ಪ್ರವೇಶ ಮಾಡಿದ್ದಾರೆ.

ಎಸ್‌. ಬಂಗಾರಪ್ಪ, ಧರ್ಮಸಿಂಗ್‌, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಲವು ನಾಯಕರು ಕುಮಾರ ಪಾರ್ಕ್ ಪೂರ್ವದ 01ನೇ ಸಂಖ್ಯೆಯ ಬಂಗಲೆಯಲ್ಲಿ ನೆಲೆಸಿದ ಬಳಿಕ ಮುಖ್ಯಮಂತ್ರಿ ಹುದ್ದೆಗೇರಿದ್ದರು. ಇದೇ ಕಾರಣಕ್ಕಾಗಿ ಈ ಬಂಗಲೆಗಾಗಿ ರಾಜಕೀಯ ನಾಯಕರ ಮಧ್ಯೆ ಕಿತ್ತಾಟ ನಡೆದಿದ್ದೂ ಇದೆ.

ADVERTISEMENT

ಬಿ.ಎಸ್‌. ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಬಂಗಲೆಯಲ್ಲಿದ್ದ ಆಗಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಲ್ಲಿಂದ ಹೊರಕ್ಕೆ ಕಳುಹಿಸಿ, ಅದೃಷ್ಟದ ಬಂಗಲೆಯನ್ನು ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಹಂಚಿಕೆ ಮಾಡುವ ಪ್ರಯತ್ನವೂ ನಡೆದಿತ್ತು.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್‌ ಮುಖ್ಯಮಂತ್ರಿ ಗಾದಿಗೆ ಏರಲೇಬೇಕೆಂಬ ಪ್ರಯತ್ನದಲ್ಲಿದ್ದಾರೆ. ‘ಅದೃಷ್ಟ’ದ ಬಂಗಲೆ ಪ್ರವೇಶಿಸಿದರೆ ಕನಸು ಕೈಗೂಡುವುದು ಸುಲಭವಾಗಬಹುದು ಎಂಬ ಕಾರಣದಿಂದ ಸರ್ಕಾರಿ ನಿವಾಸ ಬಳಕೆ ಆರಂಭಿಸಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.