ದಾವಣಗೆರೆ: ಫೆಬ್ರುವರಿ 14 ಕೆಲವರಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು, ಮೊದಲೇ ಪ್ರೇಮಿಗಳಾಗಿದ್ದರೆ ಪಿಸುಮಾತು ಹಂಚಿಕೊಳ್ಳಲು, ಹಕ್ಕಿಗಳಂತೆ ವಿಹರಿಸಲು ಇರುವ ದಿನ. ಈ ದಿನವನ್ನೇ ತಮ್ಮ ಮದುವೆ ದಿನವನ್ನಾಗಿ ಮಾಡಿಕೊಂಡವರು ದಾವಣಗೆರೆಯ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಅಶ್ವತಿ.
ಕೇರಳದ ಕೋಯಿಕ್ಕೋಡ್‌ನಟಾಗೋರ್ ಸಭಾಂಗಣದಲ್ಲಿ ಕೇರಳ ಸಂಪ್ರದಾಯದಂತೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಕಾಂಚಿಪುರಂ ರೇಷ್ಮೆ ಸೀರೆ ಮತ್ತು ಕೆಂಪು ಬ್ಲೌಸ್, ಬಂಗಾರದ ಒಡವೆಗಳನ್ನು ಮದುಮಗಳು ಧರಿಸಿದ್ದರೆ, ಮದುಮಗ ಬಿಳಿ ಪಂಚೆ, ಬಿಳಿ ಅಂಗಿ, ಶಾಲು ತೊಟ್ಟಿದ್ದರು.
ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಯು ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲು ನಿರ್ಧರಿಸಿದರು. ಅದರಂತೆ ಎರಡು ಕುಟುಂಬಗಳ ಸದಸ್ಯರು, ಆಪ್ತರು, ಸ್ನೇಹಿತರು, ಕೆಲವು ಸಹೋದ್ಯೋಗಿಗಳ ಮುಂದೆ ದಾಂಪತ್ಯಕ್ಕೆ ಕಾಲಿರಿಸಿದರು.
ಪ್ರೀತಿಗೆ ರಾಜ್ಯ, ಭಾಷೆ ಮುಂತಾದ ಯಾವುದೇ ಎಲ್ಲೆಗಳಿರುವುದಿಲ್ಲ ಎಂಬುದಕ್ಕೆ ಈ ಮದುವೆ ಸಾಕ್ಷಿಯಾಯಿತು. ಆಂಧ್ರಪ್ರದೇಶದ ವಿಶಾಖಪಟ್ಟಣಂ ಕೃಷ್ಣರಾವ್- ಪಾರ್ವತಿ ದಂಪತಿ ಪುತ್ರ ಬಗಾದಿ ಗೌತಮ್ ಅವರು 2009ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಕ್ಯಾಲಿಕಟ್‌ನ ಹಿರಿಯ ವಕೀಲರಾದ ಸೆಲ್ವಿರಾಜ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ಪುಷ್ಪಾ ಅವರ ಪುತ್ರಿ ಅಶ್ವತಿ ಅವರು 2013 ನೇ ಬ್ಯಾಚ್‌ನ ಐಎಎಸ್ ಅಧಿಕಾರಿ.
ಉಡುಪಿಯಲ್ಲಿ ಕೆಲಸ ಮಾಡಿದ್ದ ಅಶ್ವತಿ ಅವರು 2 ವರ್ಷಗಳ ಹಿಂದೆ ದಾವಣಗೆರೆ ಜಿಲ್ಲಾ ಪಂಚಾಯಿತಿಗೆ ಸಿಇಒ ಆಗಿ ಬಂದಿದ್ದರು. ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಗೌತಮ್ ನಾಲ್ಕು ತಿಂಗಳ ಹಿಂದೆಯಷ್ಟೇ ದಾವಣಗೆರೆಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದರು. ನಾಲ್ಕೇ ತಿಂಗಳಲ್ಲಿ ಇವರ ನಡುವೆ ಪ್ರೇಮ ಹುಟ್ಟಿತೇ ಎಂದು ನೋಡಿದಾಗ ಇವರ ಪ್ರೀತಿಗೆ ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಪ್ರೀತಿ ಬಹಿರಂಗಗೊಂಡಿದ್ದು ಮಾತ್ರ ದಾವಣಗೆರೆಯಲ್ಲಿ.
17ಕ್ಕೆ ಆರತಕ್ಷತೆ: ಅಶ್ವತಿ ಊರಲ್ಲಿ ಮದುವೆ ನಡೆದರೆ, ಆರತಕ್ಷತೆಯನ್ನು ಗೌತಮ್ ಬಗಾದಿ ಊರಲ್ಲಿ ಇಟ್ಟುಕೊಂಡಿದ್ದಾರೆ. ಫೆಬ್ರುವರಿ 17ರಂದು ವಿಶಾಖಪಟ್ಟಣದ ದಿ ಪಾರ್ಕ್ ಹೊಟೇಲ್‌ನಲ್ಲಿ ಆರತಕ್ಷತೆ ನಡೆಯಲಿದೆ. ದಾವಣಗೆರೆಗೆ ಬಂದ ಬಳಿಕ ಇಲ್ಲಿನ ಸಹೋದ್ಯೋಗಿಗಳನ್ನು, ಸ್ನೇಹಿತರನ್ನು ಆಹ್ವಾನಿಸಿ ಸ್ನೇಹಕೂಟ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.