ಬೆಂಗಳೂರು: ‘ಸರ್ಕಾರದ ಸವಲತ್ತು ಪಡೆಯಲು ತಂದೆಯ ಹೆಸರು ಕಡ್ಡಾಯ. ಯಾರದೋ ಒಂದು ಹೆಸರು ಬರೆಯಿರಿ ಎಂದರೆ ನಾವು ಯಾರ ಹೆಸರು ಬರೆಯಬೇಕು....’ ದೇವದಾಸಿ ಕುಟುಂಬದ ಯುವತಿಯೊಬ್ಬಳು ಗದ್ಗದಿತರಾಗಿ ಪ್ರಶ್ನಿಸಿದ ಪರಿ ಇದು.
ದೇವದಾಸಿ ತಾಯಂದಿರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿ ಮತ್ತು ಉದ್ದೇಶಿತ ಕರ್ನಾಟಕ ದೇವದಾಸಿ ಪದ್ಧತಿ (ತಡೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ ಕುರಿತು ಚರ್ಚಿಸಲುಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ವಿಮುಕ್ತ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ವೇದಿಕೆ ಮತ್ತು ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಷನ್ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಕೊಪ್ಪಳದ ಯುವತಿಯೊಬ್ಬರು ಕೇಳಿದ ಈ ಪ್ರಶ್ನೆ ಒಮ್ಮೆಲೆ ನೀರವ ವಾತಾವರಣ ಸೃಷ್ಟಿಸಿತು.
‘ತಲೆಮಾರುಗಳಿಂದ ದೇವದಾಸಿ ಪದ್ಧತಿಯಲ್ಲಿ ಸಿಲುಕಿರುವ ಕುಟುಂಬದ ಹೆಣ್ಣು ಮಗು ನಾನು. ಈ ಪದ್ಧತಿಯನ್ನು ವಿರೋಧಿಸಿ ವಿದ್ಯಾಭ್ಯಾಸ ಪಡೆದಿದ್ದೇನೆ. ಯಾವುದೇ ಸವಲತ್ತಿಗೆ ಅರ್ಜಿ ಸಲ್ಲಿಸುವಾಗ ತಂದೆಯ ಹೆಸರು ದಾಖಲಿಸಲೇಬೇಕು. ತಂದೆಯ ಹೆಸರು ಗೊತ್ತಿಲ್ಲ ಎಂದರೆ, ಮುಖವನ್ನೊಮ್ಮೆ ನೋಡಿ ಯಾವುದೋ ಒಂದು ಹೆಸರು ಬರೆಯಮ್ಮ ಅಧಿಕಾರಿಗಳು ಹೇಳುತ್ತಾರೆ. ಇದು ತೀರಾ ಮುಜುಗರ ಉಂಟು ಮಾಡುತ್ತದೆ. ಇದೇ ಕಾರಣಕ್ಕೆ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನೇ ಮೊಟುಕುಗೊಳಿಸಿದ್ದಾರೆ. ಸೌಲಭ್ಯ ಪಡೆಯುವುದಕ್ಕು ಹಿಂಜರಿಯುತ್ತಾರೆ’ ಎಂದು ಪರಿಸ್ಥಿತಿ ವಿವರಿಸಿದರು.
‘ದೇವದಾಸಿ ಪದ್ಧತಿ ನಿಷೇಧ ಕಾಯ್ದೆ 1982ರಲ್ಲಿ ಜಾರಿಗೆ ಬಂದರೂ ಇಂದಿಗೂ ಈ ಸಂಪ್ರದಾಯ ಜೀವಂತವಾಗಿದೆ. 90ರ ದಶಕದಲ್ಲಿ ಸರ್ಕಾರ ನಡೆಸಿದ ದೇವದಾಸಿ ಸಮೀಕ್ಷೆಯಲ್ಲಿ ಹೆಸರಿಲ್ಲದೇ ಇರುವುದರಿಂದ ಮಾಸಾಶನ ಸಿಕ್ಕಿಲ್ಲ. ಮಕ್ಕಳನ್ನು ನೋಡಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಕಸ ಆಯುವ ಸ್ಥಿತಿ ನಮ್ಮದು’ ಎಂದು ದಾವಣಗೆರೆಯ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಿಂದ ಬಂದಿದ್ದ ದೇವದಾಸಿಯರು ಹಾಗೂ ಅವರ ಮಕ್ಕಳು ಬಿಚ್ಚಿಟ್ಟ ಕಣ್ಣೀರಿನ ಕಥೆಗಳು ಅಲ್ಲಿ ನೆರೆದವರ ಹೃದಯ ಹಿಂಡಿದವು.
ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರಶೆಟ್ಟಿ, ‘ದೇವದಾಸಿ ಕುಟುಂಬಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಸರ್ಕಾರಕ್ಕೆ ಒತ್ತಡ ಹೇರಬೇಕು. ಸರ್ಕಾರ ಜಗ್ಗದಿದ್ದರೆ ಕಾನೂನು ಹೋರಾಟ ನಡೆಸಬೇಕು. ಅದಕ್ಕೆ ಬೇಕಿರುವ ನೆರವನ್ನು ಪ್ರಾಧಿಕಾರ ಒದಗಿಸಲಿದೆ’ ಎಂದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್. ಜಾಫೆಟ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಿ ಇಂದಿರಾ ಅವರಿಗೆ ಸಂತ್ರಸ್ತರು ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಉದ್ಯೋಗ ನೀಡಲು ₹40 ಲಕ್ಷ ಲಂಚ!
‘ಈ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಉನ್ನತ ವಿದ್ಯಾಭ್ಯಾಸ ಪಡೆದವರೂ ಉದ್ಯೋಗ ಪಡೆಯಲು ಲಂಚ ಕೊಡಲೇಬೇಕು. ಸರ್ಕಾರಿ ಉದ್ಯೋಗವೊಂದಕ್ಕೆ ₹40 ಲಕ್ಷ ಲಂಚ ಕೇಳಿದರು. ₹40 ಕೊಡಲೂ ಸಾಧ್ಯವಾಗದ ಸ್ಥಿತಿ ನಮ್ಮದು. ಸವಲತ್ತು ಕೇಳಿಕೊಂಡು ಹೋದಾಗ ನಮ್ಮನ್ನು ನೋಡುವ ರೀತಿಯೇ ಬೇರೆ’ ಎಂದು ಹೇಳುತ್ತಾ ದೇವದಾಸಿಯೊಬ್ಬರ ಮಗಳು ಕಣ್ಣೀರಿಟ್ಟಾಗ ಬಹುತೇಕ ಸಭಿಕರ ಕಣ್ಣಾಲಿಗಳು ತುಂಬಿಕೊಂಡವು.
ಬೇಡಿಕೆಗಳು...
* ದೇವದಾಸಿ ತಾಯಂದಿರು ಮತ್ತು ಅವರ ಮಕ್ಕಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು.
* ದೇವದಾಸಿ ಕುಟುಂಬಗಳ ಸಮಗ್ರ ಅಭಿವೃದ್ಧಿಗೆ 2018ರಲ್ಲಿ ರೂಪಿಸಿರುವ ಮಸೂದೆಯನ್ನು ಅಂಗೀಕರಿಸಬೇಕು.
* ದೇವದಾಸಿ ಕುಟುಂಬಗಳ ಸಮಗ್ರ ಸಮೀಕ್ಷೆ ನಡೆಸಬೇಕು. ದೇವದಾಸಿ ಕುಟುಂಬಗಳ ಪಟ್ಟಿಯಿಂದ ಕೈಬಿಟ್ಟಿರುವ ಮಹಿಳೆಯರ ಸೇರ್ಪಡೆಗಾಗಿ ಹೊಸ ಸರ್ವೆ ನಡೆಸಬೇಕು.
* 9 ತಿಂಗಳಿಂದ ಬಾಕಿ ಇರುವ ಮಾಸಾಶನ ಬಿಡುಗಡೆ ಮಾಡಬೇಕು. ದೇವದಾಸಿ ಮಕ್ಕಳಿಗೆ ವಿಶೇಷ ವಿದ್ಯಾರ್ಥಿವೇತನ ನೀಡಬೇಕು.
* ದೇವದಾಸಿ ಮಕ್ಕಳ ಮದುವೆಗೆ ನೀಡುವ ಪ್ರೋತ್ಸಾಹಧನ ಒಂದು ವರ್ಷದಿಂದ ಬಿಡುಗಡೆಯಾಗಿಲ್ಲ. ಇದನ್ನು ಕೂಡಲೇ ಬಿಡುಗಡೆ ಮಾಡಬೇಕು. ದೇವದಾಸಿ ಕುಟುಂಬಗಳ ಸದಸ್ಯರ ನಡುವೆಯೇ ಮದುವೆ ನಡೆದರೂ ಪ್ರೋತ್ಸಾಹಧನ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.