ADVERTISEMENT

ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಸಂಚು: ಎಚ್.ಡಿ.ಕುಮಾರಸ್ವಾಮಿ

ದೇವದಾರಿ ಗಣಿ ಯೋಜನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 0:05 IST
Last Updated 29 ಜೂನ್ 2024, 0:05 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ನವದೆಹಲಿ: ದೇವದಾರಿ ಗಣಿ ಯೋಜನೆ ಬಗ್ಗೆ ಜನರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಟ್ಟ ಅಭಿಪ್ರಾಯ ಉಂಟು ಮಾಡಲು ಸಂಚು ಮಾಡಲಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ನವದೆಹಲಿಯಲ್ಲಿ ರಾಜ್ಯದ ಸಂಸದರ ಸಭೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ‘ರಾಜ್ಯಕ್ಕೆ ₹2,800 ಕೋಟಿಗೂ ಹೆಚ್ಚು ಆದಾಯ ತಂದುಕೊಡುವ ಹಾಗೂ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಈ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇವದಾರಿ ಗಣಿಗಾರಿಕೆಗೆ ನಾನು ಹೊಸದಾಗಿ ಒಪ್ಪಿಗೆ ನೀಡಿಲ್ಲ. ರಾಜ್ಯ ಸರ್ಕಾರವೇ ಇದಕ್ಕೆ ಅನುಮತಿ ಕೊಟ್ಟಿದೆ. ಹಣಕಾಸು ನೆರವು ಪಡೆಯುವ ವಿಚಾರದಲ್ಲಿ ಯೋಜನೆಯ ಕಡತವನ್ನು ಆರ್ಥಿಕ ಇಲಾಖೆಗೆ ಕಳಿಸಬೇಕಿತ್ತು. ಅದನ್ನು ಮಾಡಿದ್ದೇನೆ. ಕುದುರೆಮುಖ ಪ್ರದೇಶದಲ್ಲಿ ಕೆಐಒಸಿಎಲ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರೆ ಕ್ರಮ ಜರುಗಿಸಬಹುದು ಹಾಗೂ ದಂಡವನ್ನು ಹಾಕಬಹುದು. ಅದನ್ನು ಬಿಟ್ಟು ಸರ್ಕಾರಿ ಸ್ವಾಮ್ಯದ ಕಂಪನಿಯೊಂದರ ಯೋಜನೆಗೆ ಅಡ್ಡಗಾಲು ಹಾಕಿದರೆ ಅದು ಮತ್ತಷ್ಟು ನಷ್ಟಕ್ಕೆ ತುತ್ತಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ದೆಹಲಿಯಲ್ಲಿ ಸಂಸದರ ಸಭೆ ಕರೆಯಲಾಗಿತ್ತು. ಕೇಂದ್ರದಿಂದ ಬಾಕಿ ಇರುವ 26 ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ನಮಗೆ ಕೊಟ್ಟಿದೆ. ನೀರಾವರಿ, ತೆರಿಗೆ ಪಾಲು, ಅನುದಾನಗಳ ಬಗ್ಗೆ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಏಮ್ಸ್, ಐಐಟಿಗಳ ಪ್ರಸ್ತಾವನೆಯನ್ನು ಕೊಟ್ಟಿದ್ದಾರೆ. ರಾಜ್ಯ ಸರ್ಕಾರದಲ್ಲಿರುವ ಮಾಹಿತಿ ಕೊರತೆ ಬಗ್ಗೆ ಮಾತನಾಡಿದ್ದೇವೆ. ಸರಿಯಾದ ಮಾಹಿತಿಯೊಂದಿಗೆ ಬಂದರೆ ನೆರವು ಕೊಡುತ್ತೇವೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ’ ಎಂದು ಅವರು ಮಾಹಿತಿ ನೀಡಿದರು.

‘15ನೇ ಹಣಕಾಸಿನ ಆಯೋಗದಲ್ಲಿ ಹಣದ ಕಡಿತದಲ್ಲಿ ಆಗಿರುವ ಬಗ್ಗೆ ಚರ್ಚೆಯಾಗಿದೆ. 16ನೇ ಹಣಕಾಸು ಆಯೋಗದಲ್ಲಿ ಸಮಸ್ಯೆ ಆಗಬಾರದು. ರಾಜ್ಯ ಸರ್ಕಾರವು ಆಯೋಗದ ಮುಂದೆ ಅಭಿಪ್ರಾಯ ಮಂಡಿಸಿ ಸರಿಪಡಿಸಬೇಕು. ಪದೇ ಪದೇ ಕೇಂದ್ರದ ವಿರುದ್ಧ ಹೇಳಿಕೆ ಕೊಡಬಾರದು’ ಎಂದರು.

ಬಜೆಟ್‌ನಲ್ಲಿ ರೈಲು ಯೋಜನೆ ಸೇರ್ಪಡೆ: 

ಹೆಜ್ಜಾಲ - ಚಾಮರಾಜನಗರ ನಡುವಿನ ರೈಲ್ವೆ ಯೋಜನೆಯನ್ನು ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಸೇರಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಈ ಬಗ್ಗೆ ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಕೆ.ಅನ್ನದಾನಿ ಬರೆದಿದ್ದ ಪತ್ರದ ಬಗ್ಗೆ ಸ್ಪಂದಿಸಿರುವ ಸಚಿವರು, ಈ ಬಗ್ಗೆ ಮಂಡ್ಯ ಲೋಕಸಭೆ ಕ್ಷೇತ್ರದ ಸಂಸದರೂ ಆಗಿರುವ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಹೆಜ್ಜಾಲ-ಚಾಮರಾಜನಗರ ನಡುವಿನ ಮಾರ್ಗವು ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು ಮಾರ್ಗವಾಗಿ ಹಾದು ಹೊಗಲಿದ್ದು, ಈ ಯೋಜನೆ ಈ ಭಾಗದ ಜನರ ಬಹುದಿನಗಳ ಕನಸಾಗಿದೆ. ಈ ರೈಲ್ವೆ ಮಾರ್ಗವನ್ನು ಮಂಜೂರು ಮಾಡಬೇಕು ಎಂದು ಸಚಿವರು ಮನವಿ ಮಾಡಿದ್ದರು. 

ಕಾಯಂ ಶಿಕ್ಷಕರ ನೇಮಕ: ಮಂಡ್ಯದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಕಾಯಂ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ತಿಳಿಸಿದ್ದಾರೆ.

ಈ ಬಗ್ಗೆ ಕುಮಾರಸ್ವಾಮಿ ಅವರು ಮಾಡಿದ್ದ ಮನವಿಗೆ ಸ್ಪಂದಿಸಿರುವ ಅವರು, ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.