ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರಷ್ಟು ನಂಬಿಕೆ ದ್ರೋಹವನ್ನು ಬೇರೆ ಯಾರೂ ಮಾಡಿಲ್ಲ ಎಂದು ಸಾಹಿತಿ ದೇವನೂರ ಮಹಾದೇವ ಭಾನುವಾರ ಇಲ್ಲಿ ಟೀಕಿಸಿದರು.
‘ಜನರು ಮೋದಿ ಅವರನ್ನು ನಂಬಿದಷ್ಟು ಬೇರೆ ಯಾರನ್ನೂ ನಂಬಿರಲಿಲ್ಲ. ಆದರೆ, ಆ ನಂಬಿಕೆಗಳನ್ನು ಪ್ರಧಾನಿ ಹುಸಿಯಾಗಿಸಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
‘ಕಪ್ಪು ಹಣ ವಾಪಸ್ ತಂದು ₹ 15 ಲಕ್ಷವನ್ನು ಎಲ್ಲರ ಖಾತೆಗೆ ಹಾಕುವುದಾಗಿ ಹೇಳಿದ್ದರು. ಆದರೆ, ಈಗ ಬ್ಯಾಂಕಿನಲ್ಲಿರುವ ಹಣಕ್ಕೇ ಭದ್ರತೆ ಇಲ್ಲದಂತಾಗಿದೆ. ಉದ್ಯೋಗ ಸೃಷ್ಟಿಸುತ್ತೇನೆ ಎಂದರು. ಈಗ ಇರುವ ಕೆಲಸ ಉಳಿದರೆ ಸಾಕು ಎನ್ನುವ ಪರಿಸ್ಥಿತಿ ಇದೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು. ಈಗ ಅವರ ಆದಾಯ ಇಳಿಯುತ್ತಿದೆ. ಇವೆಲ್ಲವೂ ನಂಬಿಕೆ ದ್ರೋಹವಲ್ಲದೆ ಮತ್ತೇನು’ ಎಂದು ಪ್ರಶ್ನಿಸಿದರು.
ಹೀಗಾಗಿಯೇ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ ಮೇಲೆ ಜನರನ್ನು ಉದ್ದೇಶಿಸಿ ‘ಆತಂಕಕ್ಕೆ ಒಳಗಾಗಬೇಡಿ ನನ್ನನ್ನು ನಂಬಿ, ನಾನು ನಿಮ್ಮ ಸೇವಕ’ ಎಂದು ಟ್ವೀಟ್ ಮಾಡಿದರು. ಇದು ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಬರುವ ಸಮಾಜಸೇವಕಿ ಪಾತ್ರಧಾರಿ ಲಲಿತಾಂಬ ಹೇಳುವ ‘ನನ್ನ ನಂಬಿ ಪ್ಲೀಸ್’ ಎನ್ನುವ ಹಾಗಿದೆ ಎಂದು ಲೇವಡಿ ಮಾಡಿದರು.
ನೋಟುಗಳನ್ನು ಅಮಾನ್ಯೀಕರಣಗೊಳಿಸಿದ ಬಳಿಕ ‘ನನ್ನ ನಿರ್ಧಾರ ತಪ್ಪು ಎಂದು ಸಾಬೀತಾದರೆ, ಒಂದು ವೃತ್ತದಲ್ಲಿ ನಿಲ್ಲಿಸಿ ನನಗೆ ಶಿಕ್ಷೆ ವಿಧಿಸಿ. ಆ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ’ ಎಂದು ಪ್ರಧಾನಿ ಹೇಳಿದ್ದರು. ಈ ಹೇಳಿಕೆಗೆ ಮೂರು ವರ್ಷಗಳು ತುಂಬುತ್ತಿವೆ. ಮೋದಿ ಅವರದು ಉತ್ತರನ ಪೌರುಷದ ಹಾಗೆ ಕಾಣುತ್ತಿದೆ ಎಂದು ಅವರು ಚಾಟಿ ಬೀಸಿದರು.
‘ಭಾವನೆ, ನಂಬಿಕೆಗಳನ್ನು ಕೆರಳಿಸಿ ಛೂ ಬಿಟ್ಟರೆ ಅವು ಭೂತ ಪಿಶಾಚಿಗಳಾಗಿ ರಕ್ತ ಕೇಳುತ್ತವೆ. ಹೀಗಾಗಿ, ಜನಮುಖಿ ಸಂಘಟನೆಗಳು ಮಾತ್ರವಲ್ಲ; ಆರ್‌ಎಸ್‌ಎಸ್, ಬಿಜೆಪಿ, ಮಿತ್ರ ಪಕ್ಷಗಳಲ್ಲಿ ಇರುವವರು ಹಾಗೂ ಜನರು ಇದರ ವಿರುದ್ಧ ಮಾತನಾಡಬೇಕಾದ ಕಾಲ ಸನ್ನಿಹಿತವಾಗಿದೆ’ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.