ಮೈಸೂರು: ‘ಅನರ್ಹರ ಠೇವಣಿ ಕಳೆಯಲಿ; ಮತದಾರರ ಮಾನ ಉಳಿಯಲಿ’ ಎಂಬ ಒಂದೇ ಘೋಷಣೆ ಪ್ರಸಕ್ತ ಉಪಚುನಾವಣೆಗೆ ಸಾಕು ಎಂದು ಸಾಹಿತಿ ದೇವನೂರ ಮಹಾದೇವ ತಿಳಿಸಿದರು.
‘ಬಿಕರಿ ಶಾಸಕರಿಂದಾಗಿ ಕರ್ನಾಟಕದಲ್ಲಿ ಉಪಚುನಾವಣೆ ಬಂದಿದೆ. ಇವರಿಗೆ ದ್ರೋಹಿ, ನಮಕ್ ಹರಾಮ್ ಎನ್ನದೇ ಬೇರೆ ಏನೆನ್ನಬೇಕು? ಇದಲ್ಲದೇ ಹಳ್ಳಿ ಕಡೆ ಒಂದು ಬೈಗುಳವಿದ್ದು ಅದನ್ನು ಹೇಳಲು ನನಗೆ ಮನಸ್ಸಾಗುತ್ತಿಲ್ಲ’ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಚಾಟಿ ಬೀಸಿದರು.
‘ಅನರ್ಹ ಶಾಸಕರು ನಿಜವಾದ ಅರ್ಥದಲ್ಲಿ ಮತದಾರರನ್ನೇ ಮಾರಾಟ ಮಾಡಿದ್ದಾರೆ. ಜನತಂತ್ರ ವ್ಯವಸ್ಥೆಯನ್ನು ಗಲೀಜು ಮಾಡಿದ ಈ ಕುಬ್ಜ ರಾಜಕಾರಣಿಗಳು ಮತ್ತೆ ಚುನಾವಣೆಗೆ ಸ್ಪರ್ಧಿಸಿರುವುದನ್ನು ಧೈರ್ಯ ಅನ್ನಬೇಕೋ, ಭಂಡತನ ಅನ್ನಬೇಕೋ, ನಿರ್ಲಜ್ಜತೆ ಅನ್ನಬೇಕೋ ತಿಳಿಯದಾಗಿದೆ’ ಎಂದು ಕಿಡಿಕಾರಿದರು.
‘ಮಹಾರಾಷ್ಟ್ರದ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಪ್ರಕಾರ ಶಾಸಕರೆಂದರೆ ಖರೀದಿ ವಸ್ತುಗಳು. ಶಾಸಕರನ್ನು ಖರೀದಿ ಮಾಡುವವರನ್ನು ದುಷ್ಟ, ಮನೆಹಾಳ ಅನ್ನುತ್ತಾರೆ. ಇಂಥವರ ಕೈಗೆ ದೇಶ ಕೊಟ್ಟರೆ ದೇಶವನ್ನು ಆ ದೇವರೂ ಕಾಪಾಡಲಾರ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.