ಬೆಂಗಳೂರು: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ಗೆ (ಕೆಕೆಆರ್‌ಡಿಬಿ) ಕೋಟ್ಯಂತರ ರೂಪಾಯಿ ಅನುದಾನ ನೀಡಿದರೂ ಕಾಮಗಾರಿಗಳ ಕ್ರಿಯಾ ಯೋಜನೆ ಅನುಮೋದನೆ, ಅಂದಾಜು ಪಟ್ಟಿ ತಯಾರಿ ಮತ್ತು ಟೆಂಡರ್ ಪ್ರಕ್ರಿಯೆ ವಿಳಂಬವೂ ಸೇರಿದಂತೆ ನಾನಾ ಕಾರಣಗಳಿಂದ ನಿರೀಕ್ಷೆಯಂತೆ ವೆಚ್ಚ ಆಗಿಲ್ಲ.
ಪ್ರಸಕ್ತ ಸಾಲಿನಲ್ಲಿಯೂ (2023–24) ಕೆಕೆಆರ್‌ಡಿಬಿಗೆ ಸರ್ಕಾರ ₹3 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದೆ. ಈ ಮೊತ್ತದಲ್ಲಿ ₹750 ಕೋಟಿಯನ್ನು ಆರ್ಥಿಕ ಇಲಾಖೆಯು 2023ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಡಿಸೆಂಬರ್ ಅಂತ್ಯವಾದರೂ ಇನ್ನೂ ಪ್ರಸಕ್ತ ವರ್ಷದ ಕಾಮಗಾರಿಗಳ ಕ್ರಿಯಾ ಯೋಜನೆ ಅಂತಿಮಗೊಂಡಿಲ್ಲ.
ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ನೀಡಿದ್ದ ಭರವಸೆಯಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹5 ಸಾವಿರ ಕೋಟಿಯನ್ನು ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಅಲ್ಲದೆ, ಕಲಬುರಗಿಯಲ್ಲಿ ಕಳೆದ ಸೆ. 17ರಂದು ಮಾತನಾಡಿದ್ದ ಮುಖ್ಯಮಂತ್ರಿ, ಕಲ್ಯಾಣ ಕರ್ನಾಟಕದ ಭಾಗದ ಬೆಳವಣಿಗೆಗೆ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಲಾಗಿದ್ದು, ನಕ್ಷೆ ತಯಾರಾಗುತ್ತಿದೆ ಎಂದಿದ್ದರು.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಕಳೆದ ಡಿ. 27ರಂದು ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನೆ ಕಲಬುರಗಿಯಲ್ಲಿ ನಡೆದಿದೆ. ವ್ಯಾಪ್ತಿಯ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಮೈಕ್ರೋ ಹಾಗೂ ಮ್ಯಾಕ್ರೋ ಯೋಜನೆಯ ಕ್ರಿಯಾ ಯೋಜನೆಗಳನ್ನು ಜ. 10ರ ಒಳಗೆ ಕಡ್ಡಾಯವಾಗಿ ಮಂಡಳಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಪ್ರಗತಿ ಕುಂಠಿತವಾಗಲು ಕಾರಣರಾಗುವ ಅಧಿಕಾರಿಗಳು, ಎಂಜಿನಿಯರ್‌ಗಳ ವಿವರಗಳನ್ನು ಪಡೆದು ಸೂಕ್ತ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಶೇ 30ರಷ್ಟು ಮಾತ್ರ ವೆಚ್ಚ: ಹಿಂದಿನ ಸಾಲಿನಲ್ಲಿ ವೆಚ್ಚವಾಗದ ₹2,655.89 ಕೋಟಿ ಕೆಕೆಆರ್‌ಡಿಬಿ ಖಾತೆಯಲ್ಲಿದೆ. ಪ್ರಸಕ್ತ ಸಾಲಿನ ನವೆಂಬರ್ ಅಂತ್ಯದವರೆಗೆ ಈ ವ್ಯಾಪ್ತಿಯ ಏಳು (ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ) ಜಿಲ್ಲೆಗಳಿಗೆ ಒಟ್ಟು ₹2,113.81 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ₹642.33 ಕೋಟಿ (ಶೇ 30) ಮಾತ್ರ ವೆಚ್ಚವಾಗಿದೆ.
ಕಳೆದ ಸಾಲಿನಲ್ಲಿ (2022–23) ವೆಚ್ಚ ಮಾಡಲು, ಅದಕ್ಕೂ ಹಿಂದಿನ ಸಾಲಿನ ಬಾಕಿ ₹783.59 ಕೋಟಿ ಮತ್ತು ಬಿಡುಗಡೆಯಾದ ₹2,900 ಕೋಟಿ ಸೇರಿ ಒಟ್ಟು ₹ 3,683.59 ಕೋಟಿ ಅನುದಾನ ಲಭ್ಯ ಇತ್ತು. ಆ ಸಾಲಿನಲ್ಲಿ ಮೈಕ್ರೋ ಯೋಜನೆಗಳಡಿ ನಿಗದಿಪಡಿಸಿದ್ದ ಕ್ರಿಯಾ ಯೋಜನೆಗಳಿಗೆ ₹1,500 ಕೋಟಿಯಲ್ಲಿ ₹786.09 (ಶೇ 52) ಕೋಟಿ ವೆಚ್ಚವಾಗಿದೆ. ಮ್ಯಾಕ್ರೋ ಯೋಜನೆಗಳಡಿ ₹1,400 ಕೋಟಿಯಲ್ಲಿ ವೆಚ್ಚವಾಗಿರುವುದು ₹241.61 ಕೋಟಿ (ಶೇ 17) ಮಾತ್ರ. ಹೀಗೆ ಒಟ್ಟು ಕೇವಲ ₹1,027.70 ಕೋಟಿ (ಶೇ 27.89) ವೆಚ್ಚವಾಗಿತ್ತು.
ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ. ಸುಂದರೇಶ್ ಬಾಬು, ‘ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಗೆ ಕಳೆದ ನ. 28ರಂದು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಜಿಲ್ಲಾಮಟ್ಟದಲ್ಲಿ ತಕ್ಷಣ ಕ್ರಿಯಾಯೋಜನೆಗಳನ್ನು ತಯಾರಿಸಿ ಮಂಡಳಿಯಿಂದ ಅನುಮೋದನೆ ಪಡೆದು ತ್ವರಿತವಾಗಿ ಕಾಮಗಾರಿಗಳಿಗೆ ಟೆಂಡರ್ ಕರೆದು ಅನುಷ್ಠಾನಗೊಳಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.
‘ವಿಧಾನಸಭೆ ಚುನಾವಣೆ ಮತ್ತು ಕಾಮಗಾರಿಗಳ ಅನುಷ್ಠಾನಕ್ಕೆ ನಿರ್ಬಂಧ ಇದ್ದುದರಿಂದ ನಿರೀಕ್ಷೆಯಂತೆ ಪ್ರಗತಿ ಸಾಧ್ಯವಾಗಿಲ್ಲ. ಅಲ್ಲದೆ, ಹೊಸ ಸರ್ಕಾರ ಜುಲೈನಲ್ಲಿ ಬಜೆಟ್ ಮಂಡಿಸಿದ್ದು, ಆಗಸ್ಟ್‌ನಲ್ಲಿ ಹೊಸ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆದರೂ, ಕಳೆದ ಮೂರು ತಿಂಗಳ ಅವಧಿಯಲ್ಲಿ ₹500 ಕೋಟಿ ವೆಚ್ಚವಾಗಿದೆ’ ಎಂದರು.
ಮುಖ್ಯಮಂತ್ರಿ ಸಭೆ ನಾಳೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಸಂಬಂಧಪಟ್ಟವರ ಸಭೆಯನ್ನು ಮಂಗಳವಾರ (ಜ. 9) ಬೆಳಿಗ್ಗೆ 11 ಗಂಟೆಗೆ ನಡೆಸಲಿದ್ದಾರೆ. ಸಭೆಗೆ ಹಾಜರಾಗುವಂತೆ ಆ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್, ಮುಖ್ಯಮಂತ್ರಿಯ ಸಲಹೆಗಾರ (ಆರ್ಥಿಕ) ಬಸವರಾಜ ರಾಯರಡ್ಡಿ, ಮುಖ್ಯಮಂತ್ರಿಯ ಸಲಹೆಗಾರ (ನೀತಿ ಮತ್ತು ಕಾರ್ಯಕ್ರಮ) ಬಿ.ಆರ್. ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಆಹ್ವಾನ ನೀಡಲಾಗಿದೆ. ಅಲ್ಲದೆ, ವಿಡಿಯೊ ಸಂವಾದದ ಮೂಲಕ ಭಾಗವಹಿಸುವಂತೆ ಆ ಭಾಗದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.