ಬೆಂಗಳೂರು: ‘ಏಕಗವಾಕ್ಷಿ ಯೋಜನೆಯಡಿ ಹಸಿರು ನಿಶಾನೆ ನೀಡಲಾಗಿರುವ ಕೈಗಾರಿಕಾ ಯೋಜನೆಗಳಿಗೆ ಗರಿಷ್ಠ 100 ದಿನಗಳ ಒಳಗೆ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ನೀಡಲು ಮೈಕ್ರೋಸಾಫ್ಟ್ ಕಂಪನಿಯ ನೆರವಿನಿಂದ ‘ಉಮಾ’ (ಉದ್ಯೋಗ ಮಿತ್ರ ಅಸಿಸ್ಟೆಂಟ್) ಎಂಬ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಫೆಬ್ರುವರಿ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆ ಮಾಡಲಾಗುವುದು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಏಕಗವಾಕ್ಷಿ ಯೋಜನೆ ಜಾರಿ ಸಂಬಂಧ ಮೈಕ್ರೋಸಾಫ್ಟ್ ಸಂಸ್ಥೆಯ ಪ್ರತಿನಿಧಿಗಳು ನೀಡಿದ ಪ್ರಾತ್ಯಕ್ಷಿಕೆ ವೀಕ್ಷಿಸಿದ ನಂತರ ಸಚಿವರು ಈ ಪ್ರತಿಕ್ರಿಯೆ ನೀಡಿದರು.
‘ಕೆಲವು ರಾಜ್ಯಗಳಲ್ಲಿ ಕೈಗಾರಿಕಾ ಹೂಡಿಕೆ ಯೋಜನೆಗಳಿಗೆ ಎಲ್ಲ ಅನುಮೋದನೆಗಳನ್ನು 60-70 ದಿನಗಳಲ್ಲಿ ನೀಡಲಾಗುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಸರಾಸರಿ 300 ದಿನ ತೆಗೆದುಕೊಳ್ಳಲಾಗುತ್ತಿದೆ. ಇದನ್ನು 60-70 ದಿನಗಳಿಗೆ ಇಳಿಸಬೇಕೆಂಬುದು ಗುರಿ. ಇಲ್ಲದೆ ಹೋದರೆ ನಾವು ಹೂಡಿಕೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ತಂತ್ರಜ್ಞಾನದ ನೆರವು ನೀಡುವಂತೆ ಮೈಕ್ರೋಸಾಫ್ಟ್ ಕಂಪನಿಗೆ ಜವಾಬ್ದಾರಿ ವಹಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.
‘ಕೈಗಾರಿಕಾ ಯೋಜನೆಗಳಿಗೆ ರಾಜ್ಯದಲ್ಲಿ ಅಗ್ನಿಶಾಮಕ, ಕಾನೂನು, ಅರಣ್ಯ ಮುಂತಾದ 33 ಇಲಾಖೆಗಳ ಅನುಮೋದನೆ ಬೇಕಾಗುತ್ತದೆ. ಜತೆಗೆ 147 ಬಗೆಯ ಸೇವೆಗಳಿವೆ. ಅವುಗಳನ್ನು ಒಂದೇ ಕಡೆ ತರಬೇಕಾಗಿದೆ. ಈ ತಂತ್ರಾಂಶ ಈ ಕೆಲಸ ಮಾಡಲಿದೆ. ಜತೆಗೆ ಉದ್ಯಮಿಗಳು ಕೂಡ ಕುಳಿತಲ್ಲಿಯೇ ತಮ್ಮ ಯೋಜನೆ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೂ ಇದು ನೆರವಾಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಕರ್ನಾಟಕದಲ್ಲಿ ಹೂಡಿಕೆ ಏಕೆ ಮಾಡಬೇಕು? ಹೇಗೆ ಮಾಡಬೇಕು? ಇತ್ಯಾದಿ ವಿಷಯಗಳ ಬಗ್ಗೆ ಎಲ್ಲ ಭಾಷೆಗಳಲ್ಲಿ ಈ ತಂತ್ರಾಂಶ ಮಾಹಿತಿ ನೀಡಲಿದೆ. ಇದಕ್ಕೆ ಕೃತಕ ಬುದ್ಧಿಮತ್ತೆಯ ನೆರವು ಕೂಡ ಪಡೆಯಲಾಗಿದೆ. ಧ್ವನಿ ಮಾಧ್ಯಮದಲ್ಲೂ ಕೂಡ ಉದ್ಯಮಿಗಳು ತಮ್ಮಿಚ್ಛೆಯ ಭಾಷೆಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ದೇಶದಲ್ಲೇ ಈ ರೀತಿಯ ವ್ಯವಸ್ಥೆ ಹೊಂದುವ ರಾಜ್ಯ ನಮ್ಮದಾಗಲಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.