ADVERTISEMENT

ಡಿಸಿ, ಸಿಇಒ, ಎಸ್ಪಿ ಸಮನ್ವಯದಿಂದ ಕೆಲಸ ಮಾಡಿದರೆ ಅಭಿವೃದ್ಧಿ ವೇಗ: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 7:50 IST
Last Updated 8 ಜುಲೈ 2024, 7:50 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: 'ಅಧಿಕಾರಿಗಳನ್ನು ಟೀಕೆ ಮಾಡಲು ಕರೆದ ಸಭೆ ಇದಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿ ಯಾವ ರೀತಿ ಮಾಡಿದ್ದೀರಿ ಎಂದು ಪರಿಶೀಲಿಸಲು ಕರೆದ ಸಭೆ ಇದು. ಪ್ರತಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಡಿಸಿ, ಸಿಇಒ, ಎಸ್ಪಿ ಇವರ ಪಾತ್ರ ದೊಡ್ಡದು. ಇವರು ಮೂರು ಜನ ಸಮನ್ವಯದಿಂದ ಬೇರೆ ಅಧಿಕಾರಿಗಳನ್ನು ಜೊತೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೆ ಅಭಿವೃದ್ಧಿ ವೇಗವಾಗಿ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

'ಅನೇಕ ಜನಪರ ಕಾರ್ಯಕ್ರಮಗಳನ್ನು ನಾವು ಜಾರಿಗೆ ತಂದಿದ್ದೇವೆ. ಅವುಗಳನ್ನು ಜನರನ್ನು ತಲುಪಬೇಕು' ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರಯ.

'ನಾನು ಮಂತ್ರಿಯಾಗಿ 40 ವರ್ಷಗಳಾದವು. 40 ಕ್ಕೂ ಹೆಚ್ಚು ವರ್ಷಗಳಿಂದ ಅಧಿಕಾರಿಗಳ ಕಾರ್ಯ ವೈಖರಿಯನ್ನು ನೋಡುತ್ತಿದ್ದೇನೆ. ರಾಜಕಾರಣಿಗಳು, ಅಧಿಕಾರಿಗಳು ಅನುಭವದ ಮೇಲೆ ಆಡಳಿತ ಹೆಚ್ಚು ಪರಿಣಾಮಕಾರಿಯಾಗಬೇಕು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿಲ್ಲ' ಎಂದರು

'ಅವತ್ತು ಭ್ರಷ್ಟಾಚಾರ ಹೇಗಿತ್ತು, ಇವತ್ತು ಹೇಗಿದೆ ಎಂದು ನೋಡಿದಾಗ, ಕಾರ್ಯಾಂಗ ಮತ್ತು ಶಾಸಕಾಂಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಕಂಡುಬರುತ್ತದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಪರಿಣಾಮಕಾರಿಯಾಗಿ ಕೆಲಸಮಾಡಬೇಕು' ಎಂದು ಸಲಹೆ ನೀಡಿದರು.

'ಕರ್ನಾಟಕ ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ನೀವು ಕೆಲಸ ಮಾಡುವ ಜಿಲ್ಲೆಯ ಬಗ್ಗೆ ಮೊದಲೇ ತಿಳಿದುಕೊಂಡಿರಬೇಕು. ಅಲ್ಲಿನ ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿಗಳ ಬಗ್ಗೆ ಅರಿತುಕೊಳ್ಳಬೇಕು. ಅಲ್ಲಿನ ಸಾಕ್ಷರತೆ, ಶಿಕ್ಷಣ, ತಲಾ ಆದಾಯ ಮೊದಲಾದವುಗಳ ಕುರಿತು ತಿಳಿದಿರಬೇಕು' ಎಂದರು.

'ಎಸ್‌.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ.10 ರಷ್ಟು ಕಡಿಮೆಯಾಗಿದೆ. ಪರೀಕ್ಷಾ ಅಕ್ರಮಗಳನ್ನು ನಿಯಂತ್ರಣದಲ್ಲಿಟ್ಟಿರುವುದೇ ಒಂದು ಕಾರಣವಾಗಲು ಸಾಧ್ಯವಿಲ್ಲ. ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು, ಸಿಇಒಗಳು, ಶಿಕ್ಷಣ ಇಲಾಖೆಯ ಹಿರಿ ಅಧಿಕಾರಿಗಳದೂ ಜವಾಬ್ದಾರಿ ಇದೆ. ಒಟ್ಟಿಗೆ ಕುಳಿತು ಚರ್ಚೆ ಮಾಡಿ ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸಬೇಕು ಎಂದೂ ಹೇಳಿದರು.

ಜನಸ್ಪಂದನ ಅರ್ಜಿಗಳ ಸಕಾರಾತ್ಮಕ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳು ಗಜೆಟಿಯರ್‌, ಎಕನಾಮಿಕ್‌ ಸರ್ವೇ ಓದಿದರೆ ಆ ಜಿಲ್ಲೆಯ ಇತಿಹಾಸ, ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಸಾಧ್ಯ. ಫ್ರೇಸರ್‌ ಎಂಬ ಅಧಿಕಾರಿಯ ಸಲಹೆ ಇಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್‌, ಗಾಯಕ್‌ವಾಡ್‌, ಶಾಹು ಮಹಾರಾಜ ಮೊದಲಾದವರು ಒಳ್ಳೆಯ ಅರಸರೆಂದು ಹೆಸರು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ಮನ್ರೋ ಎಂಬ ಅಧಿಕಾರಿ ಕಲೆಕ್ಟರ್‌ ಆಗಿದ್ದರು. ಇಂದಿಗೂ ಅಲ್ಲಿನ ಜನ ತಮ್ಮ ಮಕ್ಕಳಿಗೆ ಅವರ ಹೆಸರಿಡುತ್ತಾರೆ. ನಾವೆಲ್ಲರೂ ಜನಸೇವಕರು ಎಂಬ ಭಾವನೆಯಿಂದ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದೂ ಹೇಳಿದರು.

'ಬಡವರ ಬಗ್ಗೆ ಅನುಕಂಪ ಇರಬೇಕು. ಅಸಮಾನತೆ ನೀಗಿಸಲು ಪ್ರಯತ್ನಿಸಬೇಕು. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌ ಅವರನ್ನು ಓದುತ್ತೇವೆ. ಸಂವಿಧಾನ ಅರಿತುಕೊಳ್ಳಬೇಕು ಎಂದು ಹೇಳುತ್ತೇವೆ. ಇದು ಕೇವಲ ಓದುವುದಕ್ಕಲ್ಲ; ಅನುಷ್ಠಾನ ಮಾಡುವುದಕ್ಕೆ ಎಂಬುದನ್ನು ಅರಿತುಕೊಳ್ಳಿ. ಈ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಪರಿಸ್ಥಿತಿ ಬದಲಾದಂತೆ ನಾವೂ ಬದಲಾಗಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.