ಬೆಂಗಳೂರು: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆಯಲ್ಲಿನ ಅಮಾಯಕರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ಮಾಜಿ ಸಚಿವ ರೋಷನ್ ಬೇಗ್ ಮನವಿ ಮಾಡಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೈಲಿನಲ್ಲಿ ಇರುವವರ ಪೋಷಕರು ನನ್ನನ್ನು ಭೇಟಿ ಮಾಡಿ ತಮ್ಮ ಮಕ್ಕಳ ಬಗ್ಗೆ ಅಳಲು ತೋಡಿಕೊಂಡರು. ನಾಲ್ಕು ವರ್ಷಗಳಿಂದ ಮಕ್ಕಳು ಜೈಲಿನಲ್ಲಿದ್ದಾರೆ. ಅವರು ಕಳ್ಳತನ ಮಾಡಿಲ್ಲ. ಡಕಾಯಿತಿ ಮಾಡಿಲ್ಲ. ಹುಬ್ಬಳ್ಳಿ ಪ್ರಕರಣವನ್ನು ಸರ್ಕಾರ ಹಿಂಪಡೆದಿದೆ. ಅದೇ ರೀತಿ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆಯಲ್ಲಿನ ಅಮಾಯಕರ ಮೇಲಿನ ಪ್ರಕರಣವನ್ನು ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿದರು. ಈ ಕಾರಣಕ್ಕೆ ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ’ ಎಂದರು.
‘ತಪ್ಪು ಮಾಡಿರುವವರನ್ನು ಹಾಗೂ ಬೆಂಕಿ ಹಚ್ಚಿದವರನ್ನು ಬಿಡಬೇಡಿ. ಅಮಾಯಕರನ್ನು ಮಾತ್ರ ಬಿಡಿ ಎಂದು ಮನವಿ ಮಾಡಿದ್ದೇನೆ’ ಎಂದರು.
ಕಾಂಗ್ರೆಸ್ ಸೇರಲು ಇಂಗಿತ: ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಬೇಗ್, ‘ಕಾಂಗ್ರೆಸ್ ಪಕ್ಷ ನನ್ನನ್ನು ಉಚ್ಚಾಟಿಸಿದ್ದು, ಪಕ್ಷವು ಸದ್ಯದಲ್ಲೆ ಆ ಆದೇಶವನ್ನು ಹಿಂಪಡೆಯಲಿದೆ. ಆ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಮರಳುವ ವಿಚಾರ ನೋಡೋಣ. ರಾಜಕಾರಣದಲ್ಲೇ ಇರಬೇಕಾಗುತ್ತದೆ’ ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ಮರಳುವ ಇಂಗಿತ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.