ಬೆಳಗಾವಿ: ಕರ್ನಾಟಕ– ಮಹಾರಾಷ್ಟ್ರದ ಗಡಿ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಕೋರಿ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ ಮಾನೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ನವದೆಹಲಿಯಲ್ಲಿ ಪ್ರಧಾನಿಯನ್ನು ಖುದ್ದು ಭೇಟಿ ಮಾಡಿದ ಧೈರ್ಯಶೀಲ, ಲಿಖಿತ ಮನವಿ ಕೂಡ ಸಲ್ಲಿಸಿದ್ದಾರೆ.
‘ಡಿ.14ರಂದು ಗೃಹಮಂತ್ರಿ ಅಮಿತ್ ಶಾ ಅವರು ಸಂಧಾನ ಸಭೆ ನಡೆಸಿದರು. ಅದರಂತೆಯೇ ನಾವು ನಡೆದುಕೊಂಡಿದ್ದೇವೆ. ಆದರೆ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸಭೆಯ ನಿಯಮ ಉಲ್ಲಂಘಿಸಿದ್ದಾರೆ. ಕೇಂದ್ರ ಗೃಹಮಂತ್ರಿಗಳ ಸೂಚನೆ ಧಿಕ್ಕರಿಸಿದ್ದಾರೆ’ ಎಂದೂ ಮಾನೆ ನೀಡಿದ ಪತ್ರದಲ್ಲಿ ಹೇಳಿದ್ದಾರೆ.
‘ಸುಪ್ರೀಂ ಕೋರ್ಟ್ ಆದೇಶ ಬರುವವರೆಗೆ ಎರಡೂ ರಾಜ್ಯಗಳವರು ಏನನ್ನೂ ಮಾತಾಡಬಾರದು ಎಂದು ಅಮಿತ್ ಶಾ ಅವರು ಸೂಚಿಸಿದ್ದರು. ನಾನು ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷನಾದ್ದರಿಂದ ಅಲ್ಲಿನ ಮರಾಠಿ ಜನರ ಅಳಲು ಕೇಳಲು ಡಿ.19ರಂದು ಬೆಳಗಾವಿಗೆ ಹೊರಟಿದ್ದೆ. ಆದರೆ, ನನ್ನ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಒಕ್ಕೂಟ ವ್ಯವಸ್ಥೆಯನ್ನೂ ಧಿಕ್ಕರಿಸಿದ್ದಾರೆ’ ಎಂದೂ ತಿಳಿಸಲಾಗಿದೆ.
‘ಗಡಿ ಭಾಗದಲ್ಲಿ ಮರಾಠಿಗರಿಗೆ ಅನ್ಯಾಯ ಆಗುತ್ತಿದೆ. ಕಾರಣ ತಾವು ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆ ಬಗೆಹರಿಸಬೇಕು. ಮರಾಠಿಗರಿಗೆ ನ್ಯಾಯ ಒದಗಿಸಬೇಕು’ ಎಂದೂ ಪ್ರಧಾನಿಗೆ ನೀಡಿದ ಮನವಿಯಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.