ADVERTISEMENT

ಸದನದಲ್ಲಿ ಧರ್ಮರಾಯ, ಅರ್ಜುನ, ದುರ್ಯೋಧನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 17:19 IST
Last Updated 19 ಡಿಸೆಂಬರ್ 2018, 17:19 IST

ಬೆಳಗಾವಿ: ಧರ್ಮರಾಯ, ಅರ್ಜುನ, ದುರ್ಯೋಧನನ ಪಾತ್ರಗಳ ಕುರಿತು ಬುಧವಾರ ವಿಧಾನ ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆಯಾಯಿತು.

ಉಪಸಭಾಪತಿ ಎಸ್‌.ಎಲ್‌. ಧರ್ಮೇಗೌಡರಿಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಸಚಿವೆ ಜಯಮಾಲಾ ಮಾತನಾಡಿ, ‘ಧರ್ಮೇಗೌಡರು ಧರ್ಮರಾಯರಾಗಿ ಕೆಲಸ ಮಾಡಬೇಕು. ಅವರ ಮಾತನ್ನು ಎಸ್‌.ಎಲ್‌. ಬೋಜೇಗೌಡ ಅವರು ಅರ್ಜುನನಾಗಿ (ಧರ್ಮೇಗೌಡರ ಸಹೋದರ) ಕೇಳಬೇಕು‘ ಎಂದರು.

ಬಸವರಾಜ ಹೊರಟ್ಟಿ ಮಾತನಾಡಿ, ‘ಬೋಜೇಗೌಡ, ಅರ್ಜುನ ಅಲ್ಲ’ ಎಂದು ಕಾಲೆಳೆದರು.

ADVERTISEMENT

ಲಹರ್‌ ಸಿಂಗ್‌ ಮಾತನಾಡಿ, ‘ಧರ್ಮರಾಯರ ಮಾತನ್ನು ಅರ್ಜುನ ಕೇಳುತ್ತಾರೆ. ಆದರೆ, ಇಲ್ಲಿ ದುರ್ಯೋಧನ ಯಾರು ಎಂದು ಕಂಡು ಹಿಡಿಯಬೇಕಾಗಿದೆ’ ಎಂದಾಗ ಎಲ್ಲರೂ ನಕ್ಕರು. ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ‘ಧರ್ಮೇಗೌಡರು ಸೌಮ್ಯ ಹಾಗೂ ಭೋಜೇಗೌಡರು ಪಟ್ಟು ಹಿಡಿಯುವ ಸ್ವಭಾವದವರು’ ಎಂದರು.

ಸಿ.ಎಂ. ಇಬ್ರಾಹಿಂ, ಬೋಜೇಗೌಡರು ಸರಳ, ಸಜ್ಜನ ಎಂದರು. ಆಗ ಮಧ್ಯ ಪ್ರವೇಶಿಸಿದ ಕೆಲ ಸದಸ್ಯರು, ಧರ್ಮೇಗೌಡರು ಉಪಸಭಾಪತಿ ಎಂದು ಗಮನಕ್ಕೆ ತಂದಿದ್ದಲ್ಲದೇ, ಭೋಜೇಗೌಡರ ಬಗ್ಗೆ ಆಡಿದ ಮಾತನ್ನು ವಾಪಸ್‌ ಪಡೆಯಬೇಕು’ ಎಂದು ಸಲಹೆ ಮಾಡಿದರು. ಆಯನೂರು ಮಂಜುನಾಥ ಮಾತನಾಡಿ, ‘ಧರ್ಮೇಗೌಡರ ತಂದೆ ಲಕ್ಷ್ಮಯ್ಯ ಅವರ ಜೊತೆಗೆ ಶಾಸಕನಾಗಿದ್ದೆ. ಈಗ ಅವರ ಇಬ್ಬರು ಮಕ್ಕಳೊಂದಿಗೂ ಶಾಸಕನಾಗಿದ್ದೇನೆ ಎಂದು ನೆನಪಿಸಿಕೊಂಡರು. ಅರ್ಜುನನನ್ನು ಕಟ್ಟಿ ಹಾಕುವುದು ಸುಲಭವಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.