ಮಂಗಳೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಈ ವರ್ಷ 100 ದಿನಗಳಲ್ಲಿ ರಾಜ್ಯದಲ್ಲಿ 116 ಕೆರೆಗಳ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಂದಾಜು 36 ಸಾವಿರ ಕೆರೆಗಳಿರುವ ಮಾಹಿತಿ ಇದೆ. ನಿರ್ವಹಣೆ ಕೊರತೆ, ಮರಳು– ಮಣ್ಣಿಗಾಗಿ ಕೆರೆಯ ಒಡಲು ಅಗೆದಿರುವುದು, ಒತ್ತುವರಿಯಿಂದಾಗಿ ಹಲವು ಕೆರೆಗಳು ಸಂಗ್ರಹ ಸಾಮರ್ಥ್ಯ ಕಳೆದುಕೊಂಡಿವೆ.
ರೈತರು ಮತ್ತು ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ಅಲೆಯುವ ಮಹಿಳೆಯರ ಸಂಕಷ್ಟ ಗಮನಿಸಿದ ಧರ್ಮಸ್ಥಳದ ಧರ್ಮಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ.ಹೆಗ್ಗಡೆ ಅವರು 2016 ರಲ್ಲಿ ಪಾರಂಪರಿಕ ಕೆರೆಗಳ ಪುನಶ್ಚೇತನಕ್ಕಾಗಿ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಡಿಸೆಂಬರ್ ಮಧ್ಯಭಾಗದಲ್ಲಿ ಕೆರೆಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಎಂಟು ಜನ ಎಂಜಿನಿಯರು, 101 ನೋಡಲ್ ಅಧಿಕಾರಿಗಳುಹಾಗೂ 116 ಕೆರೆ ಸಮಿತಿಯ 580ಕ್ಕೂ ಹೆಚ್ಚು ಪದಾಧಿಕಾರಿಗಳ ತಂಡದವರು ಜಲಯೋಧರಾಗಿ ದುಡಿದು ಈ ಬೃಹತ್ ಕಾರ್ಯದ ಯಶಸ್ವಿಗೊಳಿಸಿದ್ದಾರೆ.
ಕೆರೆಗಳ ದುರಸ್ತಿಗೆ 412 ಜೆಸಿಬಿ. ಹಾಗೂ ಹಿಟಾಚಿ ಯಂತ್ರಗಳು,2,682ಕ್ಕೂ ಅಧಿಕ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಬಳಸಲಾಯಿತು. ಹೂಳು ತೆಗೆಯುವುದು, ಏರಿ ಭದ್ರಪಡಿಸುವುದು, ಕಾಲುವೆ ಹಾಗೂ ಕೋಡಿಗಳ ರಿಪೇರಿ, ಕಲ್ಲು ಕಟ್ಟುವುದು ಇತರ ಕಾಮಗಾರಿಗಳ ಮೂಲಕ ಕೆರೆಗಳು ಪುನರ್ ನಿರ್ಮಾಣಗೊಂಡಿವೆ. ಮಳೆಗಾಲದಲ್ಲಿ ಒಂದೆರಡು ವರ್ಷಕ್ಕೆ ಬೇಕಾದ ನೀರು ಸಂಗ್ರಹಿಸಿ ಸುತ್ತಲಿನ ಪ್ರದೇಶದ ಅಂತರ್ಜಲಮಟ್ಟ ಏರಿಕೆಗೆ ನೆರವಾಗಲಿವೆ.
ಪುನಶ್ಚೇತನಗೊಂಡ ಕೆರೆಗಳ ನಿರ್ವಹಣೆ ಹೊಣೆಯನ್ನು ಕೆರೆ ಸಮಿತಿ, ಗ್ರಾಮ ಪಂಚಾಯಿ ತಿಗಳಿಗೆ ವಹಿಸಲಾಗುತ್ತದೆ.
ಕೆರೆಗಳ ಸುತ್ತ ಅರಣ್ಯೀಕರಣಕ್ಕಾಗಿ ಮಳೆಗಾಲದಲ್ಲಿ ಕೆರೆ ಸಮಿತಿ, ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ‘ಕೆರೆಯಂಗಳದಲ್ಲಿ ಗಿಡನಾಟಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪ್ರಾದೇಶಿಕವಾರು ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು
ನೆಡಲಾಗುವುದು ಎಂದು ಡಾ.ಎಲ್.ಎಚ್. ಮಂಜುನಾಥ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.