ADVERTISEMENT

ಸೌಜನ್ಯ ಕೊಲೆ ಪ್ರಕರಣ: ನಳಿನ್‌, ಪೂಂಜಾ ವಿರುದ್ಧ ಸೌಜನ್ಯ ತಾಯಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 15:35 IST
Last Updated 1 ಮಾರ್ಚ್ 2024, 15:35 IST
<div class="paragraphs"><p>ಸೌಜನ್ಯ</p></div>

ಸೌಜನ್ಯ

   

ನವದೆಹಲಿ: ‘ಮಗಳ ಕೊಲೆ ಹಾಗೂ ಅತ್ಯಾಚಾರ ‍ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಮಾಡಿಸುವುದಾಗಿ ಸಂಸದ ನಳಿನ್‌ ಕುಮಾರ್ ಕಟೀಲು ಹಾಗೂ ಸ್ಥಳೀಯ ಶಾಸಕ ಹರೀಶ್‌ ಪೂಂಜಾ ವಾಗ್ದಾನ ಮಾಡಿದ್ದರು. ಬಳಿಕ ಅದನ್ನು ಮರೆತೇಬಿಟ್ಟರು. ಅವರು ನಮ್ಮ ಪರವಾಗಿ ನಿಲ್ಲಲಿಲ್ಲ’ ಎಂದು ಧರ್ಮಸ್ಥಳದ ಸೌಜನ್ಯ ತಾಯಿ ಕುಸುಮಾವತಿ ಆಕ್ರೋಶ ವ್ಯಕ್ತಪಡಿಸಿದರು. 

ಸೌಜನ್ಯ ಕೊಲೆ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಕರ್ನಾಟಕ ಭವನದ ಸಮೀಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ದೆಹಲಿ ಚಲೋ’ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಮಗಳ ಕೊಲೆಯಾಗಿ 12 ವರ್ಷಗಳು ಕಳೆದಿವೆ. ನಾವು 12 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದರೆ, ಅತ್ಯಾಚಾರಿಗಳು ನಿರಾಂತಕವಾಗಿ ಓಡಾಡುತ್ತಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಜನಪ್ರತಿನಿಧಿಗಳು ಜನಾಂದೋಲನದಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಆ ಬಳಿಕ ನಮ್ಮ ನೆರವಿಗೆ ಬಂದಿಲ್ಲ. ಪ್ರಧಾನಿ ಅವರನ್ನು ಭೇಟಿ ಮಾಡಬೇಕು ಎಂಬ ಉದ್ದೇಶದಿಂದ ದೆಹಲಿಗೆ ಬಂದಿದ್ದೇವೆ’ ಎಂದರು. 

ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಮಾತನಾಡಿ, ‘ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ರಾಜಕಾರಣಿಗಳು ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಹೋರಾಟಗಳನ್ನು ಮಾಡಿದ್ದೇವೆ. ಅತ್ಯಾಚಾರಿಗಳನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹಲವು ರಾಜಕಾರಣಿಗಳು ಅತ್ಯಾಚಾರಿಗಳ ಬೆಂಬಲಕ್ಕೆ ನಿಂತಿದ್ದಾರೆ. ರಾಜ್ಯದಲ್ಲಿ ಕಾನೂನು ವಿರೋಧಿ ಸರ್ಕಾರ ಇದೆ’ ಎಂದು ಕಿಡಿಕಾರಿದರು. 

‘ಧರ್ಮಸ್ಥಳದಲ್ಲಿ ಧರ್ಮದ ಹೆಸರಿನಲ್ಲಿ ಧಾರ್ಮಿಕ ಭಯೋತ್ಪಾದನೆ ನಡೆಯುತ್ತಿದೆ. ಸೌಜನ್ಯ ಕೊಲೆ ಪ್ರಕರಣದ ಸಾಕ್ಷ್ಯನಾಶ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಲಿದೆ. ಶನಿವಾರ ಸಹ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದರು. 

ರೈತರ ಹೋರಾಟದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಪ್ರತಿಭಟನಾಕಾರರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.