ಹುಬ್ಬಳ್ಳಿ: ‘ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ, ಆಕರ್ಷಕ ಬ್ರ್ಯಾಂಡ್ ಮೂಲಕ ಮಾರಾಟ ಮಾಡಿದರೆ ರೈತರ ಆದಾಯ ಹತ್ತಾರುಪಟ್ಟು ಹೆಚ್ಚುತ್ತದೆ‘ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ ಹೇಳಿದರು.
‘ರೈತರು ಮತ್ತು ನೀರಾವರಿ ಅಭಿವೃದ್ಧಿ’ ಕುರಿತು ಮಾತನಾಡಿದ ಅವರು, ‘ಹಸಿರು ಕ್ರಾಂತಿ ಆದ ನಂತರ ಕೃಷಿ ಉತ್ಪಾದನೆ ಹತ್ತು ಪಟ್ಟು ಹೆಚ್ಚಾಗಿದೆ. ಆದರೆ, ರೈತರ ಆದಾಯ ಮಾತ್ರ ಏರಿಕೆ ಆಗಿಲ್ಲ. ರೈತರ ಆದಾಯ ದ್ವಿಗುಣಗೊಳಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಲಾಗಿದೆ’ ಎಂದರು.
‘ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ಕೃಷಿ ವಿಸ್ತರಣೆ ವಿಭಾಗದ ಮೂಲಕ ರೈತರಿಗೆ ತಲುಪಿಸುವ ಕೆಲಸ ಆಗುತ್ತಿದೆ. ಬೆಳೆಗಳಲ್ಲಿ ಹೊಸ ತಳಿಗಳನ್ನು ಪರಿಚಯಿಸಲಾಗುತ್ತಿದೆ. ರೋಗ, ಕೀಟಬಾಧೆಗಳನ್ನು ನಿಯಂತ್ರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತಿದೆ’ ಎಂದು ಹೇಳಿದರು.
ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ನಿರ್ದೇಶಕ ಡಾ. ರಾಜೇಂದ್ರ ಪೊದ್ದಾರ್ ಮಾತನಾಡಿ, ‘ಕೃಷ್ಣಾ ಮೇಲ್ದಂಡೆ ಯೋಜನೆ ಮೂಲಕ ಬರದ ಹಣೆಪಟ್ಟಿ ಹೊಂದಿದ್ದ ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ, ಮುಧೋಳ, ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಸಿಕ್ಕಿದೆ. ಮುಧೋಳದಲ್ಲಿ ₹25 ಸಾವಿರ ಕೋಟಿ ಕೃಷಿ ವಹಿವಾಟು ನಡೆಯುತ್ತಿದೆ’ ಎಂದರು.
‘ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ನೀರಾವರಿಗೆ ₹ 25 ಸಾವಿರ ಕೋಟಿ ನೀಡಿದೆ. ನಾರಾಯಣಪುರ ಅಣೆಕಟ್ಟೆಗೆ ಸ್ಕಾಡಾ ಗೇಟ್ ಅಳವಡಿಸಲಾಗಿದ್ದು, ಕಂಪ್ಯೂಟರ್‌ನಿಂದಲೇ ನೀರು ನಿರ್ವಹಣೆ ಮಾಡಬಹುದು. ಅಲ್ಲದೆ, ನೀರು ಪೋಲು ತಡೆಗಟ್ಟಬಹುದು’ ಎಂದು ಹೇಳಿದರು.
ಸಾವಯವ ಕೃಷಿಕ ಆನಂದ ಕಡಕೋಳ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಮಾವು ಬೆಳೆ ಸಾಕಷ್ಟು ಹಾಳಾಯಿತು. ಆಗ ಮೌಲ್ಯವರ್ಧನೆಯ ಕುರಿತು ಯೋಚಿಸಿದೆ. ಮಾವಿನಿಂದ ಬೇರೆಬೇರೆ ಉತ್ಪನ್ನ ತಯಾರಿಸಿ ಸಂಸ್ಕರಣೆ ಮಾಡಿದ್ದರಿಂದ ಅವುಗಳನ್ನು ರಫ್ತು ಮಾಡಬಹುದು. ಮಾವು ಅಷ್ಟೇ ಅಲ್ಲ, ಯಾವುದೇ ತೋಟಗಾರಿಕೆಯ ಬೆಳೆಯನ್ನೂ ಮೌಲ್ಯವರ್ಧನೆ ಮಾಡಿದರೆ ಉತ್ತಮ ಆದಾಯ ನಿರೀಕ್ಷಿಸಬಹುದು’ ಎಂದು ಹೇಳಿದರು.
‘ಸಾವಯವ ಕೃಷಿ ಮಾಡುವುದರಿಂದ ಆರಂಭದಲ್ಲಿ ಹಿನ್ನಡೆ ಆಗುತ್ತದೆ. ನಂತರದ ದಿನಗಳಲ್ಲಿ ಭೂಮಿಯ ಫಲವತ್ತತೆ ಹೆಚ್ಚುವ ಜತೆಗೆ ಉತ್ತಮ ಆದಾಯವನ್ನೂ ಪಡೆಯಬಹುದು’ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
*
ಆಧುನಿಕ ತಂತ್ರಜ್ಞಾನ ಇದ್ದರೂ ಅರಿವಿನ ಕೊರತೆಯಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಅರಿವು ಮೂಡಿಸಿದರೆ ನೀರು ಪೋಲು ತಡೆಯಬಹದು.
-ಡಾ.ರಾಜೇಂದ್ರ ಪೊದ್ದಾರ್, ನಿರ್ದೇಶಕ, ಜಲ ಮತ್ತು ನಿರ್ವಹಣಾ ಸಂಸ್ಥೆ (ವಾಲ್ಮಿ)
*
ಮಣ್ಣಿನ ಮಾದರಿ ಆಧರಿಸಿ ಬೆಳೆ ಬೆಳೆಯುವಂತೆ ಸಲಹೆ ನೀಡಿದರೂ ಅನುಸರಿಸುವುದಿಲ್ಲ. ಈ ಕಾರಣಕ್ಕಾಗಿ ರೈತರು ನಷ್ಟ ಅನುಭವಿಸುತ್ತಾರೆ.
-ಡಾ.ಪಿ.ಎಲ್.ಪಾಟೀಲ, ಕುಲಪತಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ
*
ಸಾವಯವ ಕೃಷಿ ಮೂಲಕ ಬೆಳೆದ ಹಣ್ಣು, ತರಕಾರಿಗಳ ರುಚಿ ಬೇರೆಯೇ ಇರುತ್ತದೆ. ಮುಖ್ಯ ಬೆಳೆ ಜತೆಗೆ ಕೆಲವು ವಾಣಿಜ್ಯ ಬೆಳೆಗಳನ್ನು ಬೆಳೆದು ಅವುಗಳಿಗೆ ನಾವೇ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು.
-ಆನಂದ ಕಡಕೋಳ, ಸಾವಯವ ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.