ADVERTISEMENT

ಕಟ್ಟಡ ಕುಸಿತ ಪ್ರಕರಣ: ರಕ್ಷಣಾ ಕಾರ್ಯಾಚರಣೆ ಮುಕ್ತಾಯ, 54 ಮಂದಿ ರಕ್ಷಣೆ 

19 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 10:43 IST
Last Updated 25 ಮಾರ್ಚ್ 2019, 10:43 IST
ಜಿಲ್ಲಾಧಿಕಾರಿ ದೀಪಾ ಚೋಳನ್‌ ರಕ್ಷಣಾ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸುವಾಗ ಭಾವುಕರಾದರು. –ಪ್ರಜಾವಾಣಿ ಚಿತ್ರ
ಜಿಲ್ಲಾಧಿಕಾರಿ ದೀಪಾ ಚೋಳನ್‌ ರಕ್ಷಣಾ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸುವಾಗ ಭಾವುಕರಾದರು. –ಪ್ರಜಾವಾಣಿ ಚಿತ್ರ   

ಧಾರವಾಡ: ಕಟ್ಟಡ ಕುಸಿದ ದುರಂತದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಸೋಮವಾರ ಪೂರ್ಣಗೊಂಡಿದ್ದು, ದುರಂತದಲ್ಲಿ ಒಟ್ಟು 19 ಜನ ಮೃತಪಟ್ಟಿದ್ದಾರೆ.

ಕಳೆದ ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಇಲ್ಲಿನ ಕುಮಾರೇಶ್ವರ ನಗರದಲ್ಲಿ ಬಹುಮಹಡಿ ಕಟ್ಟಡ ಏಕಾಏಕಿ ಕುಸಿದಿತ್ತು. ಈ ದುರಂತ ಕಟ್ಟಡದಲ್ಲಿ ಸುಮಾರು 75 ಜನ ಸಿಲುಕಿದ್ದರು.

ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆ ಸಿಬ್ಬಂದಿ, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ತಂಡದ 300 ರಕ್ಷಣಾ ಸಿಬ್ಬಂದಿ ಪಾಲ್ಗೊಂಡಿದ್ದರು.

ADVERTISEMENT

ಒಟ್ಟು ಆರು ದಿನ ನಡೆದ ಕಾರ್ಯಾಚರಣೆಯಲ್ಲಿ 54 ಜನರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಉಳಿದಂತೆ 4ರಿಂದ 6 ಜನರನ್ನು ಸಾರ್ವಜನಿಕರೇ ರಕ್ಷಿಸಿದರು. 132 ಗಂಟೆಗಳ ಸತತ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿದ ಸಿಬ್ಬಂದಿ ಹೂವು, ಪೇಢೆ ನೀಡಿ ಅಭಿಮಾನದಿಂದ ಬೀಳ್ಕೊಟ್ಟರು.

ಮತ್ತೊಂದೆಡೆ ಸೋಮವಾರ ನಸುಕಿನಲ್ಲಿ ಸಿಕ್ಕ ಕೊನೆಯ ಮೃತದೇಹ ಸಹದೇವ ಸಾಳೋಂಕೆ ಅಂತ್ಯಕ್ರಿಯೆಯೂ ಇದೇ ವೇಳೆ ಕುಟುಂಬದವರ ಆಕ್ರಂದನದ ನಡುವೆ ನಡೆಯಿತು.

ಜಿಲ್ಲಾಧಿಕಾರಿ ದೀಪಾ ಚೋಳನ್‌ ರಕ್ಷಣಾ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸುವಾಗ ಭಾವುಕರಾದರು. ಅಗ್ನಿಶಾಮಕದಳದ ಡಿಐಜಿ ಡಾ. ಬಿ.ಆರ್.ರವಿಕಾಂತೇಗೌಡ ತಮ್ಮ ಸಿಬ್ಬಂದಿಯ ಕಾರ್ಯವನ್ನು, ಜನರ ಸಂಮಯಮ ಮತ್ತು ಸಹಕಾರವನ್ನು ಮುಕ್ತಕಂಠದಿಂದ ಹೊಗಳಿದರು. ಮಾಧ್ಯಮಗಳ ವೃತ್ತಿಪರತೆಯ ವರದಿಗಳು ರಕ್ಷಣಾ ಕಾರ್ಯಕ್ಕೆ ಪೂರಕವಾಗಿದ್ದವು ಎಂದು ಬಣ್ಣಿಸಿದರು.

ಎನ್‌ಡಿಆರ್‌ಎಫ್‌ ಕಾಮಾಂಡೆಂಟ್‌ ಝಾಹಿದ್ ಖಾನ್‌ ಮಾತನಾಡಿ, ‘ಕಟ್ಟಡ ದುರಂತದಲ್ಲಿ ಮೃತರ ಸಂಖ್ಯೆ ಹೆಚ್ಚಾಗಿ, ಬದುಕುಳಿಯುವವರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಇಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿತ್ತು. ಆರಂಭದಲ್ಲಿ ಸಾರ್ವಜನಿಕರೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದರಿಂದ ಬದುಕುಳಿದವರ ಸಂಖ್ಯೆ ಹೆಚ್ಚಾಯಿತು’ ಎಂದರು.

ಈ ನಡುವೆ ಕಟ್ಟಡ ದುರಂತಕ್ಕೆ ಸಂಬಂಧಿಸಿದಂತೆ ಬಂಧಿತ ಐವರು ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತನಿಖೆ ತೀವ್ರಗೊಳಿಸಲಾಗಿದೆ. ರಕ್ಷಣಾ ಕಾರ್ಯದ ಕೊನೆಯ ದಿನವಾದ ಸೋಮವಾರ, ದೊರೆತ 750 ಗ್ರಾಂ ಬೆಳ್ಳಿ ಗಣೇಶ ಮೂರ್ತಿಯನ್ನು ಎನ್‌ಡಿಆರ್‌ಎಫ್‌ ತಂಡ ಜಿಲ್ಲಾಧಿಕಾರಿಗೆ ಹಸ್ತಾಂತರಿಸುವ ಮೂಲಕ ರಕ್ಷಣಾ ಕಾರ್ಯವನ್ನು ಕೊನೆಗೊಳಿಸಿ ತಮ್ಮ ಮೂಲಸ್ಥಾನಕ್ಕೆ ತೆರಳಿದವು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.