ಧಾರವಾಡ: ಜೈಪುರ ಲಿಟರೇಚರ್ ಫೆಸ್ಟಿವಲ್‌ನ ಪ್ರೇರಣೆಯಿಂದ ಆರಂಭವಾದ ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಈಗ ಏಳರ ಹರಯ. ಇದರ ಸ್ಥಾಪಕರಾದ ಡಾ. ಎಂ.ಎಂ.ಕಲಬುರ್ಗಿ ಮತ್ತು ಡಾ. ಗಿರಡ್ಡಿ ಗೋವಿಂದರಾಜ ಅವರ ಅಗಲಿಕೆ ನಂತರ ತನ್ನ ಸ್ವರೂಪವನ್ನು ಬದಲಿಸಿಕೊಂಡಿರುವ ಈ ಬಾರಿಯ ಸಂಭ್ರಮ ಹೊಸಹಾದಿಯಲ್ಲಿ ಹೆಜ್ಜೆ ಇಟ್ಟಿದೆ.
ಡಾ. ಕಲಬುರ್ಗಿ ನೇತೃತ್ವದಲ್ಲಿ ಸಂಭ್ರಮ ನಡೆಯುತ್ತಿದ್ದಾಗ ಶುದ್ಧ ಸಾಹಿತ್ಯ ಮತ್ತು ಹಳೆಗನ್ನಡದ ಓದಿಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಅವರ ಹತ್ಯೆ ನಂತರ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷರಾದ ಡಾ. ಗಿರಡ್ಡಿ ಗೋವಿಂದರಾಜ ಅವರ ಅವಧಿಯಲ್ಲಿ ವೈಚಾರಿಕ ಸಂಘರ್ಷ ಮತ್ತು ಮಧ್ಯಮ ಮಾರ್ಗಗಳ ಕುರಿತ ಚರ್ಚೆಗಳು ಹೆಚ್ಚಾಗಿ ನಡೆದವು.
ಆದರೆ, ಈವರೆಗೂ ಚರ್ಚೆಯಾಗದ ದಲಿತ ಸಾಹಿತ್ಯ, ದಲಿತರ ಸಾಮಾಜಿಕ ಸ್ಥಿತಿಗತಿ ಕುರಿತ ವಿಷಯಗಳು ಈ ಬಾರಿಯ ಸಂಭ್ರಮದ ದಿಕ್ಕು ಬದಲಿಸಿವೆ.
ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ, ‘60 ಹಾಗೂ 70ರ ದಶಕದಲ್ಲಿ ದಲಿತರೇ ಅವರ ಸಮಸ್ಯೆಗಳ ಕುರಿತು ಬರೆಯಲು ಆರಂಭಿಸಿದರು. ಆದರೆ ಈಗ ದಲಿತರ ಪರಿಸ್ಥಿತಿ ಬದಲಾಗಿದೆ. ಮಧ್ಯಮ ವರ್ಗದ ದಲಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಅವರು ಸಂಘಟನೆಯ ಹಿಡಿತದಲ್ಲಿ ಇರಲು ಇಷ್ಟಪಡುವುದಿಲ್ಲ. ಹೀಗಾಗಿ ಇವರ ಸ್ಥಿತಿಗತಿ, ಸಾಹಿತ್ಯ, ಸಾಮಾಜಿಕ ಬದುಕು ಕುರಿತು ಚರ್ಚೆ ನಡೆಸಲು ತೀರ್ಮಾನಿಸಲಾಯಿತು. ಈವರೆಗೂ ದಲಿತರ ಕುರಿತು ಸಂಭ್ರಮದಲ್ಲಿ ಚರ್ಚೆ ನಡೆದಿರಲಿಲ್ಲ’ ಎಂದರು.
ಸಂಭ್ರಮದ ಮೊದಲ ಗೋಷ್ಠಿ ‘ದಲಿತ ಸಂಕಥನ’ದಿಂದಲೇ ಆರಂಭವಾಗುತ್ತಿದೆ. ಲಕ್ಷ್ಮಣ ಗಾಯಕವಾಡ, ಸಿದ್ಧಲಿಂಗಯ್ಯ, ಬಿ.ಎಂ.ಪುಟ್ಟಯ್ಯ, ಟಿ.ಎಸ್.ಗೊರವರ ಇತ್ಯಾದಿ ದಲಿತ ಲೇಖಕರನ್ನು ಟ್ರಸ್ಟ್ ಈ ಬಾರಿ ಆಹ್ವಾನಿಸಿದೆ.ಜತೆಗೆ ಇದೇ ಮೊದಲ ಬಾರಿಗೆ ಬರಗೂರು ರಾಮಚಂದ್ರಪ್ಪ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಏಳನೇ ಆವೃತ್ತಿಯನ್ನು ಅವರೇ ಉದ್ಘಾಟಿಸಿ ಆಶಯ ಭಾಷಣ ಮಾಡಲಿದ್ದಾರೆ.
ಮೊದಲ ಬಾರಿಗೆ ಕೆಲವೊಂದು ಗೋಷ್ಠಿಗಳಿಗೆ ಪ್ರಾಯೋಜಕತ್ವ ಪಡೆಯಲಾಗಿದೆ. ಸಾಹಿತ್ಯ ಸಮ್ಮೇಳನದ ಬೆನ್ನಲ್ಲೇಮತ್ತೆ ಮೂರು ದಿನ ಧಾರವಾಡದಲ್ಲಿ ಸಾಹಿತ್ಯ, ಸಂಸ್ಕೃತಿಯ ರಸದೌತಣ ಸಾಹಿತ್ಯಾಭಿಮಾನಿಗಳಿಗೆ ಸಿಗಲಿದೆ.
ಮುಖ್ಯಾಂಶಗಳು
2019ರ ಸಾಹಿತ್ಯ ಸಂಭ್ರಮದಲ್ಲಿ 17 ಗೋಷ್ಠಿಗಳು
ಬರಗೂರು ರಾಮಚಂದ್ರಪ್ಪ ಅವರಿಂದ ಉದ್ಘಾಟನೆ
www.vividlipi.com/live-event/ನಲ್ಲಿ ನೇರ ಪ್ರಸಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.