ADVERTISEMENT

‘ಸಂಭ್ರಮ’ದಲ್ಲಿ ‘ಉಚಲ್ಯಾ’ ಹೇಳಿದ‌ ಸಂಕಟದ ಕಥೆ

ದಲಿತ ಸಂಕಥನ ಗೋಷ್ಠಿಯಲ್ಲಿ ಮರಾಠಿ ಲೇಖಕ ಲಕ್ಷ್ಮಣ ಗಾಯಕವಾಡ ಅವರೊಂದಿಗೆ ಸಂವಾದ

ಮನೋಜ ಕುಮಾರ್ ಗುದ್ದಿ
Published 18 ಜನವರಿ 2019, 20:00 IST
Last Updated 18 ಜನವರಿ 2019, 20:00 IST
ದಲಿತ ಸಂಕಥನ ಸಂವಾದ ಗೋಷ್ಠಿಯಲ್ಲಿ ಲಕ್ಷ್ಮಣ ಗಾಯಕವಾಡ ಮಾತನಾಡಿದರು. ಸರಜೂ ಕಾಟ್ಕರ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ದಲಿತ ಸಂಕಥನ ಸಂವಾದ ಗೋಷ್ಠಿಯಲ್ಲಿ ಲಕ್ಷ್ಮಣ ಗಾಯಕವಾಡ ಮಾತನಾಡಿದರು. ಸರಜೂ ಕಾಟ್ಕರ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಧಾರವಾಡ: ‘ಬ್ಯಾಂಕಿಗೆ ಹತ್ತಾರು ಸಾವಿರ ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶಕ್ಕೆ ಹಾರಿದವರನ್ನು ಸುಮ್ಮನೇ ಬಿಡ್ತೀರಿ. ತುತ್ತಿನ ಚೀಲ ತುಂಬಿಸಿಕೊಳ್ಳಲು ರೊಟ್ಟಿ ಕದ್ದವರನ್ನು ಮುಲಾಜಿಲ್ಲದೇ ಜೈಲಿಗೆ ಅಟ್ಟುತ್ತೀರಿ...’

ಹೀಗೆ ಹೇಳುತ್ತಲೇ ಹೋದವರು ಮರಾಠಿಯ ಖ್ಯಾತ ಆತ್ಮಕಥೆ ‘ಉಚಲ್ಯಾ’ದ ಕಥನಕಾರ ಲಕ್ಷ್ಮಣ ‌ಗಾಯಕವಾಡ. ದಲಿತ‌ ಸಂಕಥನ ಗೋಷ್ಠಿಯಲ್ಲಿ ತಾವು ಕಂಡುಂಡ ನೋವುಗಳನ್ನು ಪಟ್ಟಿ ಮಾಡುತ್ತಲೇ ಹೋದರು.

‘ಮನುವಾದ ಎಂದಿಗೂ ದಲಿತರನ್ನು, ನಾರಿಯರನ್ನು ಅಸ್ಪೃಶ್ಯ ಎಂದು ಕರೆಯುತ್ತಲೇ ಬಂದಿದೆ. ಅದು ಈಗಲೂ ನಿಂತಿಲ್ಲ’ ಎಂದು ‌ವಿಷಾದಿಸಿದರು.

ADVERTISEMENT

‘ಗೋವನ್ನು ದೇವರು ಎಂದು ಪೂಜಿಸಲಾಗುತ್ತದೆ. ‌ಗೋಮೂತ್ರವನ್ನು ಪವಿತ್ರವೆಂದು ಕುಡಿಯುತ್ತಾರೆ. ಅದೇ ರೀತಿ ವಿಷ್ಣುವಿನ ಅವತಾರ ಎನ್ನಲಾಗುವ ವರಾಹ (ಹಂದಿ)ವನ್ನು ಒಂದು ದಿನವಾದರೂ ಮನೆಯಲ್ಲಿಟ್ಟುಕೊಳ್ಳುತ್ತಾರೆಯೇ? ಅದರ ಮೂತ್ರವನ್ನು ಪವಿತ್ರವೆಂದು ಕುಡಿಯುತ್ತಾರೆಯೇ? ಇಲ್ಲ ಎಂದಾದರೆ ಇದೆಂಥ ಆಷಾಢಭೂತಿತ‌ನ’ ಎಂದು ಟೀಕಿಸಿದರು.

‘ಅಂಧಶ್ರದ್ಧೆ ಆಚರಣೆ ಬೇಡ.‌ ಜಾತಿ ತಾರತಮ್ಯ ಬೇಡ ಎಂದು ಹೇಳಿದರೆ ಕೆಲವರಿಗೆ ಆಗಿಬರುವುದಿಲ್ಲ.‌ ಅದಕ್ಕಾಗಿಯೇ ನರೇಂದ್ರ ‌ದಾಭೋಲ್ಕರ್, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆ ನಡೆಯಿತು’ ಎಂದರು.

ಗೋಷ್ಠಿಯ ನಿರ್ದೇಶಕ ಸರಜೂ ಕಾಟ್ಕರ್, ‘ಉಚಲ್ಯಾ ಕಾದಂಬರಿಗಾಗಿ ಗಾಯಕವಾಡರಿಗೆ ಕೇಂದ್ರ ‌ಸಾಹಿತ್ಯ ಅಕಾಡೆಮಿಯು ₹ 1 ಲಕ್ಷ ಬಹುಮಾನ ನೀಡಿ ಗೌರವಿಸಿತು. ಆ ಆತ್ಮಕಥೆಯಲ್ಲಿ ಹೆಸರಿಸಲಾದ ಕೆಲವರು ಆ ಹಣದಲ್ಲಿ ತಮಗೂ ‌ಪಾಲು ಬೇಕು ಎಂದು ಕೇಳಲು ಶುರು ಮಾಡಿದರು. ಆತ್ಮಕಥೆಯಲ್ಲಿ ತಮ್ಮ ‌ಬಗ್ಗೆ ಕೆಟ್ಟದಾಗಿ ಚಿತ್ರಿಸಲಾಗಿದೆ ‌ಎಂದು ಸಿಟ್ಟಿಗೆದ್ದ ಕೆಲವರು ಗಾಯಕವಾಡರ ಮನೆ ಮೇಲೆ ಕಲ್ಲು‌ ಒಗೆದರು’ ಎಂದು ನೆನಪಿಸಿಕೊಂಡರು.

ಗಾಯಕವಾಡರು ಚುನಾವಣೆಯಲ್ಲಿ ನಿಂತ ಅನುಭವವನ್ನು ಹೇಳುವಾಗ ಹರ್ಷ ಡಂಬಳ ಎಂಬುವರು ‌‘ನೀವು‌ ಸಂವಾದದಲ್ಲಿ ಸಾಹಿತ್ಯ ಬಿಟ್ಟು ರಾಜಕೀಯ ‌ಏಕೆ ತಂದಿರಿ’ ಎಂದರು.

‘ಮೊದಲು ನಿಮ್ಮ ಚಿಂತನಾ ಕ್ರಮವನ್ನು ‌ಬದಲಿಸಿಕೊಳ್ಳಿ. ನನ್ನನ್ನು ಇಲ್ಲಿ‌ ಸಂಘಟಕರು ಕರೆಸಿದ್ದು ನನ್ನ ಜೀವನಾನುಭವ ಹೇಳಿಕೊಳ್ಳಲಿಕ್ಕೆ; ಅದನ್ನೇ ಹೇಳುತ್ತಿದ್ದೇನೆ’ ಎಂದು ಗಾಯಕವಾಡ ಚರ್ಚೆಗೆ ವಿರಾಮ ಹಾಡಿದರು.

ನೆಹರೂ ಪರ್ಸ್‌ ಕದ್ದ ಘಂಟಿಚೋರರು!

ಪ್ರಧಾನಿ ಜವಾಹರಲಾಲ್‌ ನೆಹರೂ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು. ಆಗಂತುಕನೊಬ್ಬ ಎದ್ದು ನಿಂತು ಈ ಪರ್ಸ್‌ ಯಾರದು ಎಂದು ಕೈಯೆತ್ತಿ ತೋರಿಸಿದರು. ಆ ಪರ್ಸ್‌ ನೋಡಿದ ನೆಹರೂ ತಮ್ಮ ಕಿಸೆಯನ್ನೊಮ್ಮೆ ನೋಡಿಕೊಂಡರು. ಅದು ತಮ್ಮದೇ ಎಂದು ಖಾತ್ರಿಯಾಗುತ್ತಿದ್ದಂತೆ, ‘ನನ್ನ ಪರ್ಸ್‌ ಹೇಗೆ ಎಗರಿಸಿದಿರಿ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆ ವ್ಯಕ್ತಿ, ‘ನೋಡಿ ಅತಿ ಭದ್ರತೆಯಲ್ಲಿರುವ ಪ್ರಧಾನಿಯ ಪರ್ಸ್‌ ಎಗರಿಸುವ ಚಾಕಚಕ್ಯತೆ ನಮಗಿದೆ. ಈ ನಮ್ಮ ಕಲೆಯನ್ನು ದೇಶ ಕಟ್ಟಲು ಬಳಸಿಕೊಳ್ಳಿ’ ಎಂದರಂತೆ!

ಈ ವಿಚಾರವನ್ನು ಲಕ್ಷ್ಮಣ ಗಾಯಕವಾಡ ಹೇಳುತ್ತಿದ್ದಂತೆಯೇ ಸಭೆಯಲ್ಲಿ ನಗುವಿನ ಅಲೆ ಎದ್ದಿತು.
**
ಕದ್ದ ಗೋದಿಯಲ್ಲಿ ಮೂರು ಮದುವೆ

‘ಗೋದಿ ಬೆಳೆಯನ್ನು ಇಲಿಗಳು ಹಾಳು ಮಾಡುತ್ತಿದ್ದುದರಿಂದ ಅವುಗಳನ್ನು ಹಿಡಿಯಲು ಹೊಲದ ಮಾಲೀಕರು ನಮ್ಮನ್ನು ಕರೆಯುತ್ತಿದ್ದರು. ಇಲಿಗಳ ಬಿಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ಹಿಡಿಯುತ್ತಿದ್ದೆವು. ಅಲ್ಲದೇ, ಅವು ಬಿಲದಲ್ಲಿ ಕೂಡಿಟ್ಟಿದ್ದ ಗೋದಿಯನ್ನು ಸಂಗ್ರಹಿಸಿಕೊಂಡು ಬಂದು ನಮ್ಮ ಹಿರಿಯರು ತಮ್ಮ ಮೂರು ಮಕ್ಕಳ ಮದುವೆ ಮಾಡಿದ್ದರು’ ಎಂದೂ ಗಾಯಕವಾಡ ಕರಾಳ ವಾಸ್ತವವನ್ನು ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.