ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ‘ಯೂತ್ ಆಫ್ ಜಿಎಸ್‌ಬಿ’ ತಂಡದವರು ಆಯೋಜಿಸಿರುವ ‘ಜಿಪಿಎಲ್ ಉತ್ಸವ್’ನ ಪೋಸ್ಟರ್ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಬಿಡುಗಡೆ ಮಾಡಿದರು.
ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಫೆಬ್ರುವರಿ 10, 11 ಮತ್ತು 12ರಂದು ಆಯೋಜಿಸುವ ‘ಜಿಪಿಎಲ್ ಉತ್ಸವ್’ ನಡೆಯಲಿದೆ. ಇದಕ್ಕೆ ಧೋನಿ ಶುಭ ಹಾರೈಸಿದರು. ಶಾಸಕ ಹಾಗೂ ಜಿಪಿಎಲ್ ಉತ್ಸವ್ ಆಯೋಜಕರಲ್ಲಿ ಒಬ್ಬರಾದ ವೇದವ್ಯಾಸ ಕಾಮತ್ ಉತ್ಸವಕ್ಕೆ ಧೋನಿ ಅವರನ್ನು ಆಮಂತ್ರಿಸಿದರು.
ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ಕೊಂಚಾಡಿ ಗುರುಪ್ರಸಾದ್ ಕಾಮತ್, ಕಾಞಂಗಾಡ್ ಗುರುಪ್ರಸಾದ್ ಕಾಮತ್ ಇದ್ದರು.
ಜಿಪಿಎಲ್ ಉತ್ಸವದ 7ನೇ ಆವೃತ್ತಿಯಲ್ಲಿ ಕ್ರಿಕೆಟ್ ಟೂರ್ನಿ, ಹೆಲಿಕಾಪ್ಟರ್ ರೌಂಡ್, ಬೋಟಿಂಗ್, ಕಿಡ್ಸ್ ಝೋನ್, ನಾಟಕ ಪ್ರದರ್ಶನ, ಬೊಂಬೆಯಾಟ, ವಾಯ್ಸ್ ಆಫ್ ಜಿಎಸ್‌ಬಿ ಅಡಿಷನ್, ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ, ಫುಡ್ ಕೋರ್ಟ್ ಇತ್ಯಾದಿ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅಬ್ದುಲ್ ಗಫೂರ್ ಆತ್ಮಚರಿತ್ರೆ ಬಿಡುಗಡೆ
ಕಾಸರಗೋಡು: ಶನಿವಾರ ನಗರಕ್ಕೆ ಬಂದ ಧೋನಿ, ಇಲ್ಲಿನ ಉದುಮಾದಲ್ಲಿ ನಡೆದ ಸಮಾರಂಭದಲ್ಲಿ ತಾಂತ್ರಿಕ ಶಿಕ್ಷಣ ಪರಿಣತ ಪ್ರೊ.ಅಬ್ದುಲ್ ಗಫೂರ್ ಅವರ ಆತ್ಮಚರಿತ್ರೆ ‘ಞಾನ್ ಸಾಕ್ಷಿ’ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ ಅಧ್ಯಾಪನ ಒಂದು ಕಲೆ. ಶಿಕ್ಷಕರನ್ನು ಸದಾ ಗೌರವಿಸುತ್ತೇನೆ ಎಂದರು.
ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ವಿಡಿಯೊ ಸಂದೇಶ ಮೂಲಕ ಶುಭ ಹಾರೈಸಿದರು. ದುಬಾತಿ ಆರೋಗ್ಯ ಪ್ರಾಧಿಕಾರದ ಸಿಇಒ. ಡಾ. ಮರ್‌ವಾನ್ ಅಲ್ ಮುಲ್ಲ, ಪತ್ರಕರ್ತ ಟಿ.ಎ.ಶಾಫಿ, ಸುಪ್ರೀಂ ಕೋರ್ಟ್ ವಕೀಲ ಅಖಿಲ್ ಸಿಬಲ್, ಮಾಜಿ ಕೇಂದ್ರ ಸಚಿವ ಸಲೀಂ ಇಕ್ಬಾಲ್ ಶರ್ವಾಣಿ, ಶಾಸಕರಾದ ಸಿ.ಎಚ್.ಕುಂಞಂಬು, ಎನ್.ಎ.ನೆಲ್ಲಿಕುನ್ನು, ವೇದವ್ಯಾಸ ಕಾಮತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.