ಬೆಂಗಳೂರು: ಬಾಕಿ ವೇತನ ಪಾವತಿಯೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಡಯಾಲಿಸಿಸ್ ಸಿಬ್ಬಂದಿ ರಾಜ್ಯದಾದ್ಯಂತ ಸೇವೆ ಸ್ಥಗಿತಗೊಳಿಸಿ ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಬಿಆರ್‌ಎಸ್ ಹೆಲ್ತ್ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಿಂದ 9 ತಿಂಗಳ ಇಎಸ್‌ಐ ಮತ್ತು ಇಪಿಎಫ್ ಬಾಕಿ ಉಳಿಸಿಕೊಂಡಿದೆ. ನಂತರ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ವಹಿಸಿಕೊಂಡ ಎಸ್ಕಾಗ್ ಸಂಜೀವಿನಿ ಪ್ರೈವೇಟ್ ಸಂಸ್ಥೆ ಎರಡು ತಿಂಗಳ ವೇತನ, 20 ತಿಂಗಳ ಪಿಎಫ್ ಮತ್ತು ಇಎಸ್‌ಐ, ಜೊತೆಗೆ ಪ್ರತಿ ತಿಂಗಳಿಗೆ ₹ 2 ಸಾವಿರದಂತೆ 20 ತಿಂಗಳ ಅರಿಯರ್ಸ್ ನೀಡಿಲ್ಲ. ಹೆರಿಗೆ ರಜೆ ತೆರಳಿದ್ದ 22 ಸಿಬ್ಬಂದಿಯ ಆರು ತಿಂಗಳ ಬಾಕಿ ವೇತನ ಪಾವತಿಯಾಗಿಲ್ಲ. ಮೃತಪಟ್ಟಿರುವ ಇಬ್ಬರು ಸಿಬ್ಬಂದಿಯ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.
ಬಾಕಿ ಉಳಿಸಿಕೊಂಡಿರುವ ಎಲ್ಲ ವೇತನ, ಭತ್ಯೆಗಳನ್ನು ನೀಡಬೇಕು. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 108 ಸಿಬ್ಬಂದಿಗೆ ನೀಡುವಂತೆ ಹೆಚ್ಚುವರಿ ವೇತನವನ್ನು ಕೊಡಬೇಕು ಎಂದು ಆಗ್ರಹಿಸಿದರು.
ಒಂದು ತಿಂಗಳ ಒಳಗೆ ಬೇಡಿಕೆ ಈಡೇರಿಸುವುದಾಗಿ ಕಳೆದ ಬಾರಿಯ ಪ್ರತಿಭಟನೆಯ ಸಂದರ್ಭದಲ್ಲಿ ಸಚಿವರು ಭರವಸೆ ನೀಡಿದ್ದರು. ಇದಾಗಿ ನಾಲ್ಕು ತಿಂಗಳು ಕಳೆದರೂ ಬೇಡಿಕೆ ಈಡೇರಿಸಿಲ್ಲ. ವೇತನ ಬಾಕಿ ಉಳಿಸಿಕೊಂಡಿರುವುದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ತಿಳಿಸಿದರು.
ಸೇವೆ ವ್ಯತ್ಯಯ:
ಕರ್ನಾಟಕ ರಾಜ್ಯ ಡಯಾಲಿಸಿಸ್ ಸಿಬ್ಬಂದಿ ಪ್ರತಿಭಟನೆಯಿಂದಾಗಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ಕಡೆಗಳಲ್ಲಿ ರೋಗಿಗಳು ಖಾಸಗಿ ಆಸ್ಪತ್ರೆ ಮೊರೆ ಹೋದರು.
ಮನವೊಲಿಸಲು ಯತ್ನ:
ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನವೀನ್ ಭಟ್ ಅವರು ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರಿಂದ ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾ ಆರೋಗ್ಯಾಧಿಕಾರಿಗಳ ಖಾತೆಗೆ ವೇತನ ಹಣ ವರ್ಗಾಯಿಸಲಾಗಿದ್ದು, ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು. ಶುಕ್ರವಾರ ಆರೋಗ್ಯ ಸಚಿವರೊಂದಿಗೆ ಸಭೆ ಏರ್ಪಡಿಸುವ ಭರವಸೆ ನೀಡಿದರು. ಆದರೆ ಇದರಿಂದ ತೃಪ್ತರಾಗದ ಸಿಬ್ಬಂದಿ ಮುಷ್ಕರ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.