ADVERTISEMENT

ಎತ್ತಿನಹೊಳೆ ಯೋಜನೆ: ದೊಡ್ಡಬಳ್ಳಾಪುರ, ಕೊರಟಗೆರೆ ಬಳಿ ಭೂಸ್ವಾಧೀನಕ್ಕೆ ವಿಘ್ನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 1:56 IST
Last Updated 2 ನವೆಂಬರ್ 2019, 1:56 IST
ಸಕಲೇಶಪುರದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ (ಸಂಗ್ರಹ ಚಿತ್ರ)
ಸಕಲೇಶಪುರದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ (ಸಂಗ್ರಹ ಚಿತ್ರ)   

ಬೆಂಗಳೂರು: ಎತ್ತಿನಹೊಳೆ ಯೋಜನೆಗಾಗಿ ದೊಡ್ಡಬಳ್ಳಾಪುರ ಸಮೀಪ ಜಲಾಶಯ ನಿರ್ಮಾಣಕ್ಕೆ ಅಗತ್ಯವಿರುವ 5,278 ಎಕರೆ ಜಮೀನು ಸ್ವಾಧೀನಕ್ಕೆ ವಿಘ್ನ ಎದುರಾಗಿದೆ.

ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಕೆಗಾಗಿ ದೊಡ್ಡಬಳ್ಳಾಪುರ ಸಮೀಪದ ಬೈರಗೊಂಡ್ಲು ಬಳಿ ಜಲಾಶಯ ನಿರ್ಮಿಸುವುದು ಸರ್ಕಾರದ ಉದ್ದೇಶ. ಜಲಾಶಯ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಪೀಠವೂ ಅನುಮತಿ ನೀಡಿದೆ. ಆದರೆ, ಜಮೀನು ವಶಪಡಿಸಿಕೊಳ್ಳುವ ವಿಚಾರದಲ್ಲಿ ಉಂಟಾಗಿರುವ ತೊಡಕನ್ನು ಬಗೆಹರಿಸಲು ಕಳೆದ ಒಂದು ವರ್ಷದಿಂದಲೂ ಸಾಧ್ಯವಾಗಿಲ್ಲ. ಈ ವಿಷಯ ಈಗ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಮಿತಿ ಮುಂದಿದ್ದು, ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡುವ ವಿಚಾರದಲ್ಲಿ ಸಮಸ್ಯೆ ಉಂಟಾಗಿದೆ. ಉದ್ದೇಶಿತ ಜಲಾಶಯ ಎರಡು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2797 ಎಕರೆ ಮತ್ತು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ 2681 ಎಕರೆ ಜಮೀನು ಬೇಕಿದೆ.

ADVERTISEMENT

ದೊಡ್ಡಬಳ್ಳಾಪುರ ತಾಲ್ಲೂಕು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪ ಇರುವುದರಿಂದ ಅಲ್ಲಿ ಭೂಮಿಯ ಮಾರ್ಗಸೂಚಿ ದರ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಭೂಪರಿಹಾರ ದರ ನಿಗದಿ ಮಾಡಲಾಗಿದೆ. ಅದರೆ, ಕೊರಟಗೆರೆ ತಾಲ್ಲೂಕಿನಲ್ಲಿ ಭೂಮಿ ಕಳೆದುಕೊಳ್ಳುವವರೂ ಏಕರೂಪ ದರ ನಿಗದಿ ಮಾಡಬೇಕು. ಕಡಿಮೆ ನಿಗದಿ ಮಾಡಿದರೆ ಒಪ್ಪಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಏಕರೂಪ ಪರಿಹಾರ ದರವನ್ನು ನಿಗದಿ ಮಾಡಲು ಒಪ್ಪುತ್ತಿಲ್ಲ. ಒಮ್ಮೆ ಇದಕ್ಕೆ ಅವಕಾಶ ನೀಡಿದರೆ, ಎಲ್ಲ ಕಡೆಗಳಲ್ಲೂ ಇದೇ ಬೇಡಿಕೆ ಆರಂಭವಾಗುತ್ತದೆ. ಇಲ್ಲಿ ಏಕರೂಪ ಪರಿಹಾರ ವಿತರಿಸಲು ₹1,625 ಕೋಟಿ ಬೇಕಾಗಬಹುದು.

ಜಲಾಶಯ ನಿರ್ಮಾಣಕ್ಕೆ ₹592 ಕೋಟಿ ವೆಚ್ಚವಾಗಲಿದೆ. ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೈಗಾರಿಕಾ ಪ್ರದೇಶ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ನೀರು ಒದಗಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.