ಬೆಳಗಾವಿ: ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಉತ್ತರವಲಯ ಡಿಐಜಿ ಟಿ.ಪಿ.ಶೇಷ ಅವರು ಜೈಲಿನ ಸೂಪರಿಂಟೆಂಡೆಂಟ್ ಜ್ಞಾಪನಾ ಪತ್ರ ಬರೆದಿದ್ದಾರೆ.
'ದರ್ಶನ್ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು. ಆ ಕೊಠಡಿಗೆ 24x7 ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಬೇಕು. ಪ್ರತಿನಿತ್ಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಶೇಖರಿಸಬೇಕು' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
'ದರ್ಶನ್ ಇರುವ ಸೆಲ್‌ನ ಕರ್ತವ್ಯಕ್ಕೆ ಪ್ರತ್ಯೇಕವಾಗಿ ಒಬ್ಬ ಮುಖ್ಯವೀಕ್ಷಕ ಅಧಿಕಾರಿ ನಿಯೋಜಿಸಬೇಕು. ಪ್ರತಿನಿತ್ಯ ಜೈಲರ್ ಭೇಟಿ ನೀಡಿ ಭದ್ರತೆ ಪರಿಶೀಲಿಸಬೇಕು. ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ಹಾಕಬೇಕು ಮತ್ತು ಬೀಗ ತೆರೆಯಬೇಕು. ಕರ್ತವ್ಯ ನಿರ್ವಹಿಸುವ ಮುನ್ನ ಪ್ರತಿನಿತ್ಯ ದರ್ಶನ ಸೆಲ್ ತಪಾಸಣೆ ಮಾಡಬೇಕು. ಸೆಲ್‌ಗೆ ನಿಯೋಜಿಸುವ ಸಿಬ್ಬಂದಿ 'ಬಾಡಿವೋರ್ನ್' ಕ್ಯಾಮೆರಾ ಧರಿಸಬೇಕು' ಎಂದೂ ನಿರ್ದೇಶನ ನೀಡಿದ್ದಾರೆ.
'ದರ್ಶನ್ ಭೇಟಿಗೆ ಅವರ ಪತ್ನಿ, ರಕ್ತಸಂಬಂಧಿ, ವಕಾಲತ್ತು ವಹಿಸಿದ ವಕೀಲರ ಭೇಟಿಗೆ ಮಾತ್ರ ಅವಕಾಶ ನೀಡಬೇಕು. ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ರಾಜಕೀಯ ನಾಯಕರ ಭೇಟಿಗೆ ಅವಕಾಶ ನೀಡಬಾರದು. ಸಾಮಾನ್ಯ ಬಂದಿಯಂತೆಯೇ ಪರಿಗಣಿಸಿ, ಸಾಮಾನ್ಯ ಬಂದಿಗೆ ಕೊಡುವ ಸೌಲಭ್ಯ ಮಾತ್ರ ನೀಡಬೇಕು. ಬೇರೆ ಕೈದಿಗಳ ಜೊತೆಗೆ ದರ್ಶನ್ ಬೆರೆಯವಂತಿಲ್ಲ. ಇದರ ಮೇಲೆ ನಿಗಾವಹಿಸಲು ಅಧಿಕಾರಿಗಳು 'ದಿಢೀರ್ ಭೇಟಿ (ಸರ್ಪೈಸ್ ವಿಸಿಟ್)' ಮಾಡಬೇಕು. ಕಾರಾಗೃಹ ಸುತ್ತಲೂ ಸೂಕ್ತ ಭದ್ರತೆ ಒದಗಿಸಬೇಕು' ಎಂದೂ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.