ಹುಬ್ಬಳ್ಳಿ: ‘ಸೈನಿಕರ ರಕ್ತದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಾಜಕೀಯ ಮಾಡುತ್ತಿದ್ದಾರೆ. ಸೇನೆಯ ವಿಷಯವನ್ನು ಸ್ವಾರ್ಥಕ್ಕೆ ಬಳಸುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಮಾರ್ಚ್ 9ರಂದು ಹಾವೇರಿ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಸಿದ್ಧತೆ ಕುರಿತು ಮುಖಂಡರೊಂದಿಗೆ ಚರ್ಚೆ ನಡೆಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ದೇಶದ ಇತಿಹಾಸದಲ್ಲಿಯೇ ಈ ರೀತಿಯ ಕೀಳು ಮಟ್ಟದ ರಾಜಕೀಯ ನೋಡಿಲ್ಲ. ದೇಶದ ರಕ್ಷಣೆಗಾಗಿ ಸೈನಿಕರು ತಮ್ಮ ರಕ್ತವನ್ನೇ ಚೆಲ್ಲಿ ತ್ಯಾಗ ಮಾಡುತ್ತಿದ್ದಾರೆ. ವಾಯುಪಡೆ ವಿಂಗ್ ಕಮಾಂಡರ್ ಒಬ್ಬರು ಪಾಕಿಸ್ತಾನ ಸೈನಿಕರ ವಶದಲ್ಲಿದ್ದಾರೆ. ಆದರೆ, ಸೈನಿಕರ ಹೋರಾಟದ ಫಲವಾಗಿ ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಹೇಯ ಮಾತುಗಳನ್ನು ಆಡಲು ಅವರಿಗೆ ಮನಸ್ಸು ಹೇಗೆ ಬಂತೋ ಗೊತ್ತಿಲ್ಲ. ಸೈನಿಕರ ರಕ್ತದ ಮೇಲೆ ರಾಜಕೀಯ ವ್ಯಾಪಾರ ಮಾಡುತ್ತಿರುವ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ದೇಶದ ಜನರ ಕ್ಷಮೆ ಕೇಳಬೇಕು’ ಎಂದು ಅವರು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕರಾಗಿ ಜನರ ಪರ ಕೆಲಸ ಮಾಡದ ಯಡಿಯೂರಪ್ಪ ಕೇವಲ ಆಪರೇಷನ್ ಕಮಲದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
‘ಗಡಿಯಲ್ಲಿ ಆತಂಕದ ವಾತಾವರಣ ಇರುವ ಈ ಸಂದರ್ಭದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕು. ನಮ್ಮ ಮಧ್ಯೆಯೇ ಭಿನ್ನಾಭಿಪ್ರಾಯಗಳು ಬಂದರೆ ಎದುರಾಳಿಯನ್ನು ಎದುರಿಸುವುದು ಹೇಗೆ? ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲರೂ ದೇಶ ಭಕ್ತರೇ. ಬಿಜೆಪಿ ಮುಖಂಡರು– ಕಾರ್ಯಕರ್ತರು ಅನ್ಯರನ್ನು ಟೀಕಿಸುವುದು ಪಾಕಿಸ್ತಾನಕ್ಕೆ ಹೋಗಿ ಎನ್ನುವುದನ್ನು ನಿಲ್ಲಿಸಬೇಕು. ದೇಶದ ಗಡಿಯಲ್ಲಿ ಹೋರಾಟ ಮಾಡುತ್ತಿರುವವರು ಸೈನಿಕರೇ ಹೊರತು ಕಾಂಗ್ರೆಸ್– ಆರ್‌ಎಸ್ಎಸ್ ಕಾರ್ಯಕರ್ತರಲ್ಲ’ ಎಂದು ಹೇಳಿದರು.
ರಾಜ್ಯದ ಪರ ಧ್ವನಿ ಎತ್ತದ ಸಂಸದರು: ರಾಜ್ಯದ ಹಿತಾಸಕ್ತಿ ಕಾಯುವಲ್ಲಿ ಬಿಜೆಪಿಯ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ಒಂದೇ ಒಂದು ದಿನ ರಾಜ್ಯದ ಪರವಾಗಿ ಅವರು ಮಾತನಾಡಿಲ್ಲ. ಮಹಾರಾಷ್ಟ್ರಕ್ಕೆ ₹4,500 ಕೋಟಿ ಬರ ಪರಿಹಾರ ನೀಡಿದ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ಕೇವಲ ₹800 ಕೋಟಿ ನೀಡಿದೆ. ಕಳಸಾ– ಬಂಡೂರಿ ವಿಚಾರದಲ್ಲಿಯೂ ಸಹಾಯ ಮಾಡಲಿಲ್ಲ. ನರೇಗಾ ಯೋಜನೆಯ ₹200 ಕೋಟಿ ಹಣವನ್ನು ರಾಜ್ಯಕ್ಕೆ ನೀಡಿಲ್ಲ ಎಂದರು.
ಮೋದಿಯಿಂದ ಪ್ರಜಾಪ್ರಭುತ್ವ ಸರ್ವನಾಶ: ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವವನ್ನು ಸರ್ವನಾಶ ಮಾಡುತ್ತಿದ್ದಾರೆ. ಒಳ್ಳೆಯ ದಿನಗಳು ಬರಲಿವೆ ಎಂದು ಆಶ್ವಾಸನೆ ನೀಡಿದ್ದರು. ಐದು ವರ್ಷ ಆಡಳಿತ ನಡೆಸಿರುವ ಅವರು ಯಾವ ಕ್ಷೇತ್ರದಲ್ಲಿ ಒಳ್ಳೆಯ ದಿನಗಳು ಬಂದಿವೆ ಎಂಬ ಸಾಧನೆಯ ವರದಿ ನೀಡಬೇಕು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಅದೂ ಸಾಧ್ಯವಾಗಿಲ್ಲ. ಚುನಾವಣೆಯಲ್ಲಿ ಮತ ಗಳಿಸಲು ರೈತರ ಖಾತೆಗೆ ₹2 ಸಾವಿರ ಹಾಕುವ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಟೀಕಿಸಿದರು.
ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ ತರುವುದಾಗಿ ಹೇಳಿದ್ದರೂ ಅದೂ ಮಾಡಲಿಲ್ಲ. ಭ್ರಷ್ಟಾಚಾರಿಗಳನ್ನು ಜೈಲಿಗಟ್ಟುತ್ತೇವೆ ಎಂದಿದ್ದರು ಒಬ್ಬರನ್ನೂ ಜೈಲಿಗೆ ಹಾಕಲಿಲ್ಲ. ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದ್ದಾರೆ ಎಂದರು. ದೇಶದ ಸುರಕ್ಷತೆ ವಿಷಯದಲ್ಲಿಯೂ ಸಂಪೂರ್ಣ ವಿಫಲರಾಗಿದ್ದಾರೆ. ಭಯೋತ್ಪಾದಕರ ದಾಳಿಗಳು ಹೆಚ್ಚಾಗಿವೆ. ಸುಳ್ಳಿನ ಸರದಾರ ಮೋದಿ ಸುಳ್ಳುಗಳನ್ನೇ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಪ್ರಿಂಟ್ ಮಾಡೋಕೆ ಆಗಲ್ಲ: ರೈತರ ಸಾಲಮನ್ನಾ ಆಗದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಒಂದೇ ಬಾರಿಗೆ ಸಾಲಮನ್ನಾ ಮಾಡಲು ದುಡ್ಡು ಪ್ರಿಂಟ್ ಮಾಡಲಾಗದು. ಈ ವರ್ಷ ₹12 ಸಾವಿರ ಕೋಟಿಯನ್ನು ಸಾಲಮನ್ನಾಕ್ಕಾಗಿ ತೆಗೆದಿಡಲಾಗಿದೆ. ಸಿದ್ದರಾಮಯ್ಯ ಅವರು ಸಹ ₹8100 ಕೋಟಿ ಸಾಲಮನ್ನಾ ಮಾಡಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.