ಹುಣಸೂರು: ಎಚ್.ವಿಶ್ವನಾಥ್ ಅವರು ಕಾಂಗ್ರೆಸ್‌ನಲ್ಲಿದ್ದಾಗ ಉನ್ನತ ಸ್ಥಾನ ಅಲಂಕರಿಸಿ ಮುತ್ಸದ್ಧಿ ರಾಜಕಾರಣಿ ಎನಿಸಿಕೊಂಡಿದ್ದರು. ಈಗ ಬೆಲೆ ಇಲ್ಲದಂತೆ ಆಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು.
ಕಾಂಗ್ರೆಸ್ ಎಲ್ಲ ರೀತಿ ಸ್ಥಾನ ನೀಡಿದ್ದರೂ ಕ್ಷುಲ್ಲಕ ಕಾರಣಕ್ಕೆ ಪಕ್ಷದಿಂದ ಹೊರಹೋದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪಕ್ಷಕ್ಕೆ ಸೇರಿಸಿ ಶಾಸಕರನ್ನಾಗಿ ಮಾಡಿದರು. ರಾಜ್ಯ ಘಟಕದ ಅಧ್ಯಕ್ಷರರಾಗಿ ಮಾಡಿದ್ದರು. ಇಷ್ಟಾದರೂ ತೃಪ್ತಿಯಾಗದೆ, ಆಶ್ರಯ ಕೊಟ್ಟ ಮನೆಗೆ ಕನ್ನ ಹಾಕಿ ಬಿಜೆಪಿ ಸೇರಿದ್ದಾರೆ ಎಂದು ಭಾನುವಾರ ತರಾಟೆ ತೆಗೆದುಕೊಂಡರು.
‘ವಿಶ್ವನಾಥ್ ಬಗ್ಗೆ ನನಗೆ ಗೌರವವಿತ್ತು. ಇದೀಗ ಎಲ್ಲವನ್ನೂ ಮಾರಾಟ ಮಾಡಿಕೊಂಡಿದ್ದಾರೆ. ಅವರಲ್ಲಿ ಯಾವುದೇ ಮೌಲ್ಯಗಳಿಲ್ಲ’ ಎಂದರು.
ಸಿದ್ದರಾಮಯ್ಯ ಏಕಾಂಗಿ ಎಂದು ಬಿಜೆಪಿ ಬಿಂಬಿಸುತ್ತಿದೆ. ಪಕ್ಷದ ಎಲ್ಲ ನಾಯಕರು ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಡಾ.ಜಿ.ಪರಮೇಶ್ವರ್ ಅವರಿಗೆ ಆರೋಗ್ಯ ಕೈಕೊಟ್ಟಿದೆ. ಡಿ.ಕೆ.ಶಿವಕುಮಾರ್ ವಿಶ್ರಾಂತಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಇವರೆಲ್ಲರೂಪ‍್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.
ಮೋಸ ಮಾಡಿ, ಫೋಟೊ ಇಟ್ಟರೆ ನಂಬುತ್ತಾರಾ: ಎಚ್.ಡಿ.ದೇವೇಗೌಡ ಅವರ ಫೋಟೊ ಮನೆಯಲ್ಲಿ ಇಟ್ಟಿದ್ದೇನೆ ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ‘ದೇವೇಗೌಡರಿಗೆ ಮೋಸ ಮಾಡಿ, ಈಗ ಅವರ ಫೋಟೊ ಮನೆಯಲ್ಲಿ ಇಟ್ಟಿರುವುದಾಗಿ ಹೇಳಿದರೆ ಜನ ನಂಬುತ್ತಾರೆಯೇ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್‌ನವರಿಗೆ ಬೆಲೆ ಇದೆಯೇ?’
‘ಕಾಂಗ್ರೆಸ್‌ನವರಿಗೆ ಬೆಲೆ ಇದ್ದಿದ್ದರೆ ಮೈತ್ರಿ ಸರ್ಕಾರ ಉರುಳುತ್ತಿತ್ತೇ’ ಎಂದು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಅವರು ಕೆಪಿಸಿಸಿ ಅಧ್ಯಕ್ಷರಿಗೆ ತಿರುಗೇಟು ನೀಡಿದರು.
‘ನಾನು ಸಚಿವನಾಗಲು ಬಿಜೆಪಿಗೆ ಬಂದಿಲ್ಲ. ಮೈತ್ರಿ ಸರ್ಕಾರದ ನಡವಳಿಕೆಗೆ ಬೇಸತ್ತು ಬಂದಿದ್ದೇನೆ. ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವುದು ರಾಜಕೀಯ ಲಾಭಕ್ಕಲ್ಲ. ಪ್ರಗತಿಯೇ ನನ್ನ ಉದ್ದೇಶ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.