ADVERTISEMENT

ಗೋಲಿಬಾರ್‌ ಹಿಂದೆ ರಾಜಕೀಯ ಕೈವಾಡ ಶಂಕೆ: ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 7:08 IST
Last Updated 24 ಡಿಸೆಂಬರ್ 2019, 7:08 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಮಂಗಳೂರು: ನಗರದಲ್ಲಿ ಗುರುವಾರ ನಡೆದ ಪೊಲೀಸ್‌ ಗೋಲಿಬಾರ್‌ ಹಿಂದೆ ರಾಜಕೀಯ ಕೈವಾಡ ಇರುವ ಶಂಕೆ ಇದೆ. ರಾಜ್ಯದ ಬಿಜೆಪಿ ಸರ್ಕಾರ ಕೂಡ ಇದನ್ನು ಬಯಸಿತ್ತೇನೋ ಎಂಬ ಅನುಮಾನ ಕಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಗೋಲಿಬಾರ್‌ನಲ್ಲಿ ಮೃತಪಟ್ಟವರ ಮನೆಗೆ ಮಂಗಳವಾರ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಪ‍ತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕೀಯ ಹಸ್ತಕ್ಷೇಪದಿಂದಲೇ ಈ ಗೋಲಿಬಾರ್‌ ನಡೆದಿದೆ. ಇದು ಸರ್ಕಾರಿ ಪ್ರಾಯೋಜಿತ ಗೋಲಿಬಾರ್‌’ ಎಂದು ಆರೋಪಿಸಿದರು.

ಸತ್ತವರು ಮುಸ್ಲಿಮರಾದ ಮಾತ್ರಕ್ಕೆ ಸ್ಥಳೀಯ ಬಿಜೆಪಿ ಸಂಸದರು ಮತ್ತು ಶಾಸಕರು ಅವರ ಕುಟುಂಬಗಳನ್ನು ಭೇಟಿ ಮಾಡಬಾರದೇ? ಇವರ ಮನಸ್ಥಿತಿಯನ್ನು ಗಮನಿಸಿದರೆ ಇಡೀ ಘಟನೆಯ ಹಿಂದೆ ರಾಜಕೀಯ ಕೈವಾಡ ಇದೆ ಎಂಬ ಬಲವಾದ ಅನುಮಾನ ಮೂಡುತ್ತದೆ ಎಂದರು.

ADVERTISEMENT

ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಧೋರಣೆ, ಹಠಮಾರಿತನ ಈ ಎಲ್ಲ ಘಟನೆಗಳಿಗೆ ಕಾರಣ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಷಾ ನೇರವಾಗಿ ಘಟನೆಗೆ ಕಾರಣ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ವೈಫಲ್ಯವನ್ನು ಒಪ್ಪಿಕೊಂಡು, ಅನಾಹುತದ ಹೊಣೆ ಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಪೊಲೀಸರಿಂದಲೇ ಪ್ರಚೋದನೆ:ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧದ ಪ್ರತಿಭಟನೆಗೆ ಬೆಂಗಳೂರಿನಲ್ಲಿ ಒಂದು ಲಕ್ಷ ಜನರು ಸೇರಿದ್ದರು. ಅಲ್ಲಿ ಯಾವುದೇ ಗಲಭೆ ನಡೆದಿಲ್ಲ. ಮಂಗಳೂರಿನಲ್ಲಿ ಪ್ರತಿಭಟನೆಗೆ ಜನರು ಬರುತ್ತಿದ್ದಂತೆಯೇ ಲಾಠಿ ಪ್ರಹಾರ ನಡೆಸಿದ ಪೊಲೀಸರು ಗಲಭೆಗೆ ಪ್ರಚೋದಿಸಿದರು. ತಪ್ಪು ಮುಚ್ಚಿಕೊಳ್ಳಲು ಈಗ ಕಟ್ಟುಕತೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು.

ಈಗ ಪೊಲೀಸರೇ ಘಟನೆಗೆ ಸಂಬಂಧಿಸಿದ ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಪ್ರಚೋದನೆ ನೀಡುತ್ತಿದ್ದಾರೆ. ಗಲಭೆಯ ಕುರಿತು ತನಿಖೆ ಬಾಕಿ ಇರುವಾಗ ಪೊಲೀಸರು ಏಕೆ ವಿಡಿಯೊ ತುಣುಕುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕಮಿಷನರ್‌ ಅಮಾನತಿಗೆ ಆಗ್ರಹ:ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಪರಿಸ್ಥಿತಿ ನಿಯಂತ್ರಿಸಲು ವಿಫಲರಾಗಿ, ಅಮಾಯಕರ ಸಾವಿಗೆ ಕಾರಣರಾಗಿದ್ದಾರೆ. ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು. ಗೋಲಿಬಾರ್‌ ವೇಳೆ ನೇರವಾಗಿ ಗುಂಡು ಹಾರಿಸುವಂತೆ ಸೂಚನೆ ನೀಡುತ್ತಿದ್ದ ಇನ್‌ಸ್ಪೆಕ್ಟರ್‌ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು ಎಂದು ದಿನೇಶ್‌ ಗುಂಡೂರಾವ್‌ ಆಗ್ರಹಿಸಿದರು.

ಗೋಲಿಬಾರ್‌ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಸಿಐಡಿ ತನಿಖೆ ಮತ್ತು ಮ್ಯಾಜಿಸ್ಟೀರಿಯಲ್‌ ವಿಚಾರಣೆಯಿಂದ ಸತ್ಯ ಹೊರ ಬರುವುದಿಲ್ಲ. ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷ ನಿರಂತರ ಹೋರಾಟ ನಡೆಸಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.