ಕೋಲಾರ: ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಷಡ್ಯಂತ್ರದಲ್ಲಿ ರಾಜ್ಯಪಾಲರೂ ಶಾಮೀಲಾಗಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುತರ ಆರೋಪ ಮಾಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರೇ ಇಂಥ ಕೃತ್ಯದಲ್ಲಿ ತೊಡಗಿದರೆ ಅದನ್ನು ಸಹಿಸಿಕೊಂಡು ನಾವು ಸುಮ್ಮನಿರಬೇಕೇ’ ಪ್ರಶ್ನಿಸಿದರು.
ಸರ್ಕಾರ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುವುದು ರಾಜ್ಯಪಾಲರ ಜವಾಬ್ದಾರಿ. ಆದರೆ, ಅವರು ಸರ್ಕಾರದ ವ್ಯವಸ್ಥೆ ಹಾಳು ಮಾಡಲು ಹೊರಟಿದ್ದಾರೆ. ಸಂವಿಧಾನ ಪಾಲನೆ ಮಾಡಬೇಕಾದವರೇ ಷಡ್ಯಂತ್ರದಲ್ಲಿ ಶಾಮೀಲಾದರೆ ಹೇಗೆ ಎಂದು ಕೇಳಿದರು.
‘ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತನಿಖಾ ಸಂಸ್ಥೆಯೇ ದೂರು ನೀಡಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ. ಆದರೆ, ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ದಿನವೇ ಷೋಕಾಸ್ ನೋಟಿಸ್ ಜಾರಿ ಮಾಡಿ ದ್ವೇಷದ ರಾಜಕಾರಣ ಮಾಡಲು ಮುಂದಾದರು’ ಎಂದು ಟೀಕಿಸಿದರು.
‘ರಾಜ್ಯದ ಆಡಳಿತ ವ್ಯವಸ್ಥೆ ಹಾಳುಗೆಡುವಲು ಸಂಚು ನಡೆಯುತ್ತಿದೆ. ರಾಜ್ಯಪಾಲರ ನಡೆ ಅಭಿವೃದ್ಧಿ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯಪಾಲರು ಯಾವ ಸಮುದಾಯದವರು ಎಂಬುದೇ ನಮಗೆ ಗೊತ್ತಿಲ್ಲ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರ ಹಿಂದೆಂದಿಗಿಂತಲೂ ಈಗ ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಹೆಚ್ಚಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪ್ರಿಯತೆ ಕೂಡ ಹೆಚ್ಚಾಗಿದೆ’ ಎಂದು ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಅತ್ಯಂತ ಖಂಡನೀಯ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಅವರು ಪ್ರಯತ್ನ ನಡೆಸಿದ್ದಾರೆ. ಚುನಾಯಿತ ಸರ್ಕಾರ ಹಾಗೂ ಕರ್ನಾಟಕದ ಜನತೆ ಮೇಲೆ ನಡೆಸಿರುವ ದಾಳಿ ಇದು. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ’ ಎಂದು ಸಚಿವರು ಹೇಳಿದರು.
‘ಮುಡಾ ನಿವೇಶನ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರೆ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಪರಿಹಾರ ಪಡೆದುಕೊಳ್ಳಬಹುದಿತ್ತು. ಅಧಿಕಾರ ದುರುಪಯೋಗ ಆರೋಪ ಬರುತ್ತದೆಂಬ ಕಾರಣದಿಂದ ಪರಿಹಾರ ಪಡೆದುಕೊಂಡಿರಲಿಲ್ಲ. ಬಿಜೆಪಿಯವರ ಅವಧಿಯಲ್ಲಿ ಪರಿಹಾರ ಕೊಡಲಾಗಿದ್ದು, ಕಾನೂನು ಪ್ರಕಾರ ಬಂದಿರುವ ಜಾಗವನ್ನು ಏಕೆ ಬಿಟ್ಟು ಕೊಡಬೇಕು’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಬಾರದು, ಜನರಿಗೆ ತೊಂದರೆ ಆಗಬೇಕು ಎಂಬುದು ಬಿಜೆಪಿ ಹಾಗೂ ಜೆಡಿಎಸ್ನವರ ಮನಸ್ಥಿತಿ. ಬಿಜೆಪಿ ಈಗ ಅಧಿಕಾರದಲ್ಲಿ ಇಲ್ಲ. ಹೀಗಾಗಿ ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಇದರಿಂದಲೇ ಅಭಿವೃದ್ಧಿ ವಿಚಾರದಲ್ಲಿ ವಿನಾಕಾರಣ ಅಡ್ಡಿ ಮಾಡಿಕೊಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಬರಗಾಲದ ಪರಿಹಾರ ಹಣ ಕೊಡಿಸಲು ಬಿಜೆಪಿಯಿಂದ ಸಾಧ್ಯವಾಗಲಿಲ್ಲ. ನ್ಯಾಯಾಲಯದ ಮೊರೆ ಹೋಗಿ ಹಣ ಪಡೆಯುವಂತಾಯಿತು’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.