ADVERTISEMENT

ಮರಣೋತ್ತರ ವರದಿ ತಿರುಚುವ ಪ್ರಯತ್ನ ನನ್ನ ಗಮನಕ್ಕೆ ಬಂದಿಲ್ಲ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 8:03 IST
Last Updated 19 ಜೂನ್ 2024, 8:03 IST
<div class="paragraphs"><p>ದಿನೇಶ್ ಗುಂಡೂರಾವ್</p></div>

ದಿನೇಶ್ ಗುಂಡೂರಾವ್

   

ಮೈಸೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಚಲನಚಿತ್ರ ನಟ ದರ್ಶನ್ ಹಾಗೂ ತಂಡದವರು ಮರಣೋತ್ತರ ಪರೀಕ್ಷೆಯ ವರದಿ ತಿರುಚುವ ಪ್ರಯತ್ನ ನಡೆಸಿದ್ದು ಗಮನಕ್ಕೆ ಬಂದಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಪ್ರಕರಣದಲ್ಲಿ ಪೊಲೀಸರು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.

ADVERTISEMENT

‘ಅತ್ಯಂತ ಅಮಾನವೀಯ ರೀತಿಯಲ್ಲಿ ಕೊಲೆ ನಡೆದಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ನಾನೇ ಸರಿ, ನಾನು ಮಾಡಿದ್ದೇ ಸರಿ ಎನ್ನುವ ಅತಿರೇಕದ ವರ್ತನೆ ಜಾಸ್ತಿಯಾದಾಗ ಇಂತಹ ಘಟನೆಗಳು ನಡೆಯುತ್ತವೆ. ಇದು ಸಮಾಜಕ್ಕೆ ಒಳ್ಳೆಯದಲ್ಲ’ ಎಂದು ಪ್ರತಿಕ್ರಿಯಿಸಿದರು.

ರಾಜ್ಯದ ಹಲವೆಡೆ ಭ್ರೂಣಹತ್ಯೆ ಪ್ರಕರಣಗಳು ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಚಾರದಲ್ಲಿ ನಮ್ಮ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಹದ್ದಿನ ಕಣ್ಣಿಟ್ಟಿದ್ದಾರೆ. ಎಲ್ಲೆಲ್ಲಿ ಭ್ರೂಣ ಹತ್ಯೆ ಆಗುತ್ತಿತ್ತೋ ಅಲ್ಲೆಲ್ಲ ದಾಳಿ ನಡೆಸಿ ಹಿಡಿದಿದ್ದೇವೆ. ನಮ್ಮ ಇಲಾಖೆಯವರು ತಪ್ಪು ಮಾಡುತ್ತಿದ್ದರೆ ಅವರನ್ನೂ ಪತ್ತೆ ಹಚ್ಚುತ್ತೇವೆ. ನ್ಯಾಯಾಲಯದ ಮೂಲಕ ಶಿಕ್ಷೆ ಆಗಬೇಕಾಗುತ್ತದೆ’ ಎಂದರು.

‘ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲೂ ಹಣ ಪಡೆಯುತ್ತಾರಲ್ಲಾ’ ಎಂಬ ಪ್ರಶ್ನೆಗೆ, ‘ನಮ್ಮ ವ್ಯವಸ್ಥೆಯಲ್ಲಿ ಇಂದಿಗೂ ಅದು ನಡೆಯುತ್ತಿದೆ. ಎಲ್ಲವೂ ಸರಿ ಇದೆ ಎನ್ನುವುದಿಲ್ಲ. ಇತ್ತಲೂ ಗಮನಹರಿಸಿ, ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಸಮರ್ಥಿಸಿಕೊಂಡ ಅವರು, ‘ಬೇರೆ ರಾಜ್ಯಗಳಿಗೆ ಹೋಲಿಸದರೆ ನಮ್ಮಲ್ಲೇ ಬೆಲೆ ಕಡಿಮೆ ಇದೆ. ಗ್ಯಾರಂಟಿ ಯೋಜನೆಗೂ– ತೈಲ ಬೆಲೆ ಏರಿಕೆಗೂ ಸಂಬಂಧವಿಲ್ಲ’ ಎಂದರು.

‘ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ಹಣ ಕಡಿಮೆ ಪ್ರಮಾಣದ್ದೇನಲ್ಲ. ಅದರಿಂದ ಬಡ ಜನರಿಗೆ ಬಹಳಷ್ಟು ಸಹಾಯ ಆಗುತ್ತಿದೆ. ಈ ಒಳ್ಳೆಯ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.