ವಿಜಯಪುರ: ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಹೀನ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಕೋಮು ಸಂಘರ್ಷ ಸೃಷ್ಟಿಸಲು ಹವಣಿಸುತ್ತಿದೆ. ಬಿಜೆಪಿ, ಜೆಡಿಎಸ್ ಅಧಿಕಾರದಲ್ಲಿದ್ದಾಗಲೇ ನೂರಾರು ರೈತರ ಪಹಣಿಗಳಲ್ಲಿ ವಕ್ಫ್ ಎಂದು ನಮೂದು ಮಾಡಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ದೋಷಾರೋಪಣೆ ಮಾಡಿದರು.
ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿರುವಾಗಲೇ ನೂರಾರು ರೈತರ ಆಸ್ತಿಗಳನ್ನು ವಕ್ಫ್ ಬೋರ್ಡ್‌ಗೆ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು.
2006ರಲ್ಲಿ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಮಗಳೂರಿನ ಗಾವನಹಳ್ಳಿ, ಕಡೂರಳ್ಳಿಯ 4 ಪ್ರಕರಣಗಳಲ್ಲಿ ರೈತರ ಭೂಮಿಯನ್ನು ವಕ್ಫ್‌ಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
2008ರಿಂದ 2013ರ ವರೆಗೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಅವರ ಅವಧಿಯಲ್ಲಿ ಚಿಕ್ಕಮಗಳೂರಿನಲ್ಲಿ 7 ಆಸ್ತಿಗಳಿಗೆ ಸಂಬಂಧಿಸಿದಂತೆ ಪಹಣೆ ಕಾಲಂ ನಂಬರ್ 9ರಲ್ಲಿ ವಕ್ಫ್ ಎಂದು ನಮೂದು ಮಾಡಿದ್ದಾರೆ. ಆಗ ಸಿ.ಟಿ.ರವಿ ಶಾಸಕ, ಸಚಿವರಾಗಿದ್ದರು ಎಂದರು.
2019–2023ರ ಅವಧಿಯಲ್ಲಿ ಸಿ.ಟಿ.ರವಿ ಅವರ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ 7 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸುಮಾರು 11 ಎಕರೆ ಭೂಮಿಯನ್ನು ಪಹಣೆ ಕಾಲಂ 9ರಲ್ಲಿ ವಕ್ಫ್ ಎಂದು ನಮೂದು ಮಾಡಿದ್ದಾರೆ. ಇನ್ನೂ ವಿಶೇಷ ಎಂದರೆ ರೈತರಿಗೆ ಯಾವುದೇ ನೋಟಿಸ್ ನೀಡದೇ ಈ ನಮೂದು ಮಾಡಿದ್ದಾರೆ ಎಂದು ದೂರಿದರು.
2019ರ ಜುಲೈನಿಂದ 2023ರ ಏಪ್ರಿಲ್ ವರೆಗೆ ಅಧಿಕಾರ ನಡೆಸಿದ್ದ ಬಿಜೆಪಿಯವರು ವಕ್ಫ್ ಆಸ್ತಿಗಳಿಗೆ ಸಂಬಂಧಿಸಿಂತೆ ವಿವಿಧ ಜಿಲ್ಲೆಗಳಲ್ಲಿ 216 ಪ್ರಕರಣಗಳಲ್ಲಿ ರೈತರಿಗೆ ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕಂದಾಯ ಸಚಿವರಾಗಿದ್ದಾಗ ಬೆಂಗಳೂರು ನಗರ ಜಿಲ್ಲೆಯಲ್ಲಿ 7 ಪ್ರಕರಣಗಳಲ್ಲಿ ಪಹಣೆಯ ಕಾಲಂ 11ರಲ್ಲಿ ವಕ್ಫ್ ಎಂದು ನಮೂದಿಸಿದ್ದಾರೆ ಎಂದು ದೂರಿದರು.
ಗೋವಿಂದ ಕಾರಜೋಳ ಅವರು ಸಚಿವರಾಗಿದ್ದಾಗ ಬಾಗಲಕೋಟೆ ಜಿಲ್ಲೆಯಲ್ಲಿ 11 ಪ್ರಕರಣಗಳಲ್ಲಿ ವಕ್ಫ್ ಎಂದು ನಮೂದಿಸಿದ್ದಾರೆ ಎಂದರು.
ಹಿಂದೂ–ಮುಸ್ಲಿಂ ಎಂದು ಸದಾ ಸಮಾಜವನ್ನು ವಿಭಜಿಸುವ ಕೃತ್ಯದಲ್ಲಿ ತೊಡಗಿರುವ ಬಸನಗೌಡ ಪಾಟೀಲ ಯತ್ನಾಳ ಅವರ ಜಿಲ್ಲೆಯಾದ ವಿಜಯಪುರದಲ್ಲಿ ಯಾವುದೇ ನೋಟಿಸ್ ನೀಡದೇ ಬಿಜೆಪಿ ಅವಧಿಯಲ್ಲೇ 109 ಪ್ರಕರಣಗಳಲ್ಲಿ ಪಹಣಿಯ ಕಾಲಂ 9ರಲ್ಲಿ ವಕ್ಫ್ ಎಂದು ನಮೂದು ಮಾಡಿದ್ದಾರೆ ಎಂದು ದಾಖಲೆ ತೋರಿಸಿದರು.
‘ಬಿಜೆಪಿ, ಜೆಡಿಎಸ್ ಅವಧಿಯಲ್ಲಿ ನಡೆದ ಕೆಲ ಉದಾಹರಣೆಗಳಷ್ಟೇ ಇವಾಗಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಸಮಗ್ರ ದಾಖಲೆಯನ್ನು ಬಿಡುಗಡೆ ಮಾಡಲಾಗುವುದು’ ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದರು.
‘ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ಕಾಯ್ದೆಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಕ್ಫ್ ತಿದ್ದುಪಡಿಯನ್ನು ಸಮರ್ಥಿಸಿಕೊಳ್ಳಲು ವಕ್ಫ್ ವಿವಾದವನ್ನು ಕೈಗೆತ್ತಿಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ’ ಎಂದು ದೂರಿದರು.
‘ರಾಜ್ಯದಲ್ಲಿ ಒಂದೇ ಒಂದು ಇಂಚು ರೈತರ ಮತ್ತು ಸರ್ಕಾರದ ಆಸ್ತಿಯನ್ನು ವಕ್ಫ್‌ಗೆ ಹೋಗಲ್ಲ ಬಿಡುವುದಿಲ್ಲ. ಅದೇ ರೀತಿ ವಕ್ಫ್ ಆಸ್ತಿಯನ್ನು ಬೇರೆಯವರಿಗೆ ಕೊಡುವ ಉದ್ದೇಶವೂ ಸರ್ಕಾರಕ್ಕೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ತಮ್ಮ ಅಧಿಕಾರ ಅವಧಿಯಲ್ಲಿ ರೈತರಿಗೆ ನೋಟಿಸ್ ನೀಡದೇ ವಕ್ಫ್ ಬೋರ್ಡ್‌ಗೆ ಖಾತೆ ಬದಲಾವಣೆ ಮಾಡಿಕೊಟ್ಟಿರುವ ಬಿಜೆಪಿ, ಜೆಡಿಎಸ್ ನಾಯಕರು ನೈತಿಕತೆ ಇದ್ದರೆ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ಸಚಿವ ಜಮೀರ್ ಅಹಮದ್ ರಾಜೀನಾಮೆ ಕೇಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.