ADVERTISEMENT

ಮಹಿಳೆಯ ಘನತೆಗೆ ಚ್ಯುತಿ ಆರೋಪ: ವಿಚಾರಣಾ ಕೋರ್ಟ್ ಆದೇಶ ರದ್ದು

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 16:23 IST
Last Updated 14 ಜುಲೈ 2023, 16:23 IST
   

ಬೆಂಗಳೂರು: ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡಿದ್ದಾರೆ ಎನ್ನಲಾದ ಪ್ರಕರಣವೊಂದರಲ್ಲಿ  ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಪಾಟಿ ಸವಾಲಿಗೆ ಒಳಪಡಿಸಲು ಆರೋಪಿಗೆ ಅವಕಾಶ ನೀಡದೆ ದೋಷಿ ಎಂದು ಪರಿಗಣಿಸಿ ಎರಡು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಈ ಸಂಬಂಧ ಬೆಂಗಳೂರಿನ ಎ. ಹರೀಶ್ ಕುಮಾರ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ನ್ಯಾಯಪೀಠ, ‘ಕಾನೂನಿನ ಅನ್ವಯ ಮುನ್ನಡೆಯಲು ಆರೋಪಿಗೆ ತನ್ನ ಪರ ವಕೀಲರನ್ನು ನೇಮಿಸಿಕೊಳ್ಳಲು ಅನುಮತಿ ನೀಡಿ’ ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ADVERTISEMENT

ಆರೋಪಿಯು ತನ್ನ ವಕೀಲರ ಮೂಲಕ ಸಾಕ್ಷಿಗಳನ್ನು ಪಾಟಿ ಸವಾಲಿಗೆ ಒಳಪಡಿಸಲು ಅವಕಾಶ ನೀಡುವಂತೆಯೂ ಆದೇಶಿಸಿದೆ.

ಪ್ರಕರಣವೇನು?: ‘ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಆರೋಪಿಯು ಸಂತ್ರಸ್ತೆಯ ಕೈ ಹಿಡಿದು ಎಳೆದು, ಆಕೆಯ ಖಾಸಗಿ ಅಂಗಾಂಗ‌ಗಳನ್ನು ಸ್ಪರ್ಶಿಸಿದ್ದಾರೆ. ನಂತರ ಓಡಲು ಯತ್ನಿಸಿದಾಗ ಸಂತ್ರಸ್ತೆ ಅವರನ್ನು ಹಿಡಿದು ನಮಗೆ ಒಪ್ಪಿಸಿದ್ದಾರೆ’ ಎಂದು ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆ ಕಲಂ 12 ಮತ್ತು ಐಪಿಸಿ ಕಲಂ 354 (ಎ)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಹರೀಶ್ ಕುಮಾರ್ ವಿರುದ್ಧದ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ 10 ಸಾಕ್ಷಿಗಳನ್ನು ಪರಿಶೀಲಿಸಿತ್ತು. ಆದರೆ, ಹರೀಶ್ ಕುಮಾರ್ ಪರ ವಕೀಲರು ಗೈರಾಗಿದ್ದ ಕಾರಣ ಸಾಕ್ಷಿಗಳನ್ನು ಪಾಟಿ ಸವಾಲಿಗೆ ಒಳಪಡಿಸಿರಲಿಲ್ಲ. ನಂತರ ಹರೀಶ್ ಕುಮಾರ್ ಅವರನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲ ಎಚ್.ಕೆ.ಪವನ್ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.