ADVERTISEMENT

ಅಂಗವಿಕಲರ ಸಬಲೀಕರಣ ಇಲಾಖೆಗೇ ವೈಕಲ್ಯ!

17 ಜಿಲ್ಲೆಗಳಲ್ಲಿ ಅಂಗವಿಕಲರ ಕಲ್ಯಾಣಾಧಿಕಾರಿ ಹುದ್ದೆ ಖಾಲಿ, ಬೇರೆ ಇಲಾಖೆ ಅಧಿಕಾರಿಗಳೇ ಆಧಾರ

ಇಮಾಮ್‌ಹುಸೇನ್‌ ಗೂಡುನವರ
Published 11 ಫೆಬ್ರುವರಿ 2022, 20:17 IST
Last Updated 11 ಫೆಬ್ರುವರಿ 2022, 20:17 IST
   

ಬೆಳಗಾವಿ: ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪೂರ್ಣಕಾಲಿಕ ಸಿಬ್ಬಂದಿ ಇಲ್ಲದೆ ಬಳಲುತ್ತಿದ್ದು, ಇಲಾಖೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ. 17 ಜಿಲ್ಲೆಗಳಲ್ಲಿ ಪೂರ್ಣಕಾಲಿಕವಾಗಿ ಅಂಗವಿಕಲರ ಕಲ್ಯಾಣಾಧಿಕಾರಿಗಳೇ ಇಲ್ಲ.

ಹಲವು ವರ್ಷಗಳಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಮನಸ್ಸು ಮಾಡುತ್ತಿಲ್ಲ, ‘ಸರ್ಕಾರ ನಮ್ಮ ಇಲಾಖೆ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂಬ ಆರೋಪವೂ ಅಧಿಕಾರಿಗಳಿಂದ ಕೇಳಿಬರುತ್ತಿದೆ.

ಎಲ್ಲೆಲ್ಲಿ ಖಾಲಿ?: ಇಲಾಖೆಯ ಪ್ರತಿ ಜಿಲ್ಲಾಮಟ್ಟದ ಕಚೇರಿಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಯೋಜನಾ ಸಹಾಯಕ, ಬೆರಳಚ್ಚುಗಾರ, ಡಿ ದರ್ಜೆ ನೌಕರ ಹುದ್ದೆಗಳನ್ನು ಸೃಜಿಸಲಾಗಿದೆ. ಆದರೆ, ಕಲಬುರಗಿ, ಯಾದಗಿರಿ, ವಿಜಯನಗರ, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಮೈಸೂರು, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಕೊಡಗು, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಂಗವಿಕಲರ ಕಲ್ಯಾಣಾಧಿಕಾರಿ ಹುದ್ದೆ ಖಾಲಿ ಇವೆ.

ADVERTISEMENT

ಕೆಲವರಿಗೆ ‘ಹೆಚ್ಚುವರಿ’ ಜವಾಬ್ದಾರಿಯನ್ನೂ ವಹಿಸಲಾಗಿದೆ. ಆದರೆ, ಈ ಇಲಾಖೆಗೇ ಪ್ರತ್ಯೇಕವಾಗಿ ಅಧಿಕಾರಿ ಇಲ್ಲದ್ದರಿಂದ ಫಲಾನುಭವಿ ಆಧಾರಿತ, ಸಮುದಾಯ ಆಧಾರಿತ, ಜಿಲ್ಲಾ ಹಾಗೂ ಕೇಂದ್ರ ವಲಯದ ಕಾರ್ಯಕ್ರಮಗಳು, ಅಂಗವಿಕಲರ ಹಕ್ಕುಗಳ ಅಧಿನಿಯಮ ಹಾಗೂ ಹಿರಿಯ ನಾಗರಿಕರ ಕೋಶದ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ವಿವಿಧ ಕೆಲಸಗಳಿಗಾಗಿ ಕಚೇರಿಗಳಿಗೆ ಬರುವ ಜನರು ಪರದಾಡುವಂತಾಗಿದೆ.

ರಾಜ್ಯಮಟ್ಟದ ಕಚೇರಿಯಲ್ಲೂ ಖಾಲಿ: ಇಲಾಖೆ ಕೇಂದ್ರ ಕಚೇರಿಯಲ್ಲಿರುವ ಉಪನಿರ್ದೇಶಕ, ಸಹಾಯಕ ನಿರ್ದೇಶಕ, ಮೈಸೂರು ತರಬೇತಿ ಕೇಂದ್ರದಲ್ಲಿರುವ ಉಪನಿರ್ದೇಶಕ ಹಾಗೂ ಅಂಗವಿಕಲರ ಹಕ್ಕುಗಳ ಅಧಿನಿಯಮ ಕಚೇರಿಯಲ್ಲಿರುವ ಸಹಾಯಕ ಆಯುಕ್ತರ ಹುದ್ದೆಗಳು ಖಾಲಿ ಇವೆ. ಇಲ್ಲಿಯೂ ಬೇರೆ ಇಲಾಖೆ ಅಧಿಕಾರಿಗಳನ್ನೇ ನಿಯೋಜಿಸಲಾಗಿದೆ.

ಬಡ್ತಿಯಿಂದಲೂ ವಂಚಿತ:‘1988ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರತ್ಯೇಕವಾಗಿದೆ. 2004ರಲ್ಲಿ ಇಲಾಖೆಯ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್‌ ಆರ್‌) ನಿಯಮಾವಳಿ ರಚಿಸಲಾಗಿದೆ. ಆದರೆ, ಈವರೆಗೂ ನಿಯಮಾವಳಿ ಪರಿಷ್ಕರಣೆಯಾಗದ್ದರಿಂದ ನಾವು ಸಹ ಸೇವಾ ಬಡ್ತಿಯಿಂದಲೂ ವಂಚಿತರಾಗುತ್ತಿದ್ದೇವೆ’ ಎಂದು ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ರಾಜ್ಯಮಟ್ಟದ ಹುದ್ದೆಗಳಿಗೆ ಬಡ್ತಿ ನೀಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.