ADVERTISEMENT

ಸರ್ಕಾರದ ಆಂತರಿಕ ವಿಚಾರ ಸಾರ್ವಜನಿಕವಾಗಿ ಮಾತಾಡಿದರೆ ಶಿಸ್ತು ಕ್ರಮ: ಸುರ್ಜೇವಾಲ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 11:04 IST
Last Updated 1 ನವೆಂಬರ್ 2023, 11:04 IST
ರಣದೀಪ್‌ ಸಿಂಗ್‌ ಸುರ್ಜೇವಾಲ
ರಣದೀಪ್‌ ಸಿಂಗ್‌ ಸುರ್ಜೇವಾಲ   

ಬೆಂಗಳೂರು: ‘ಪಕ್ಷದ ಸಂಘಟನೆ, ಅಧಿಕಾರ ಹಾಗೂ ಸರ್ಕಾರದ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ಸಾರ್ವಜನಿಕವಾಗಿ ಮಾತನಾಡುವಂತಿಲ್ಲ. ಪಕ್ಷದ ಶಿಸ್ತು ಮೀರಿ ಮಾತನಾಡಿದರೆ ಯಾರೇ ಆದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು‘ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಚಿವರು ಹಾಗೂ ಪಕ್ಷದ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ, ಮುಂಬರುವ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ, ನಿಗಮ-ಮಂಡಳಿ ನೇಮಕ ಹಾಗೂ ಪಕ್ಷದ ನಾಯಕರ ಹೇಳಿಕೆಗಳ ವಿಚಾರವಾಗಿ ಬುಧವಾರ ಸುದೀರ್ಘ ಚರ್ಚೆ ನಡೆಸಿದರು.

ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ, ‘ಪಕ್ಷದ ಶಾಸಕರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ಧಿ, ರಾಜ್ಯದ ಜನರಿಗೆ ಅನುಕೂಲವಾಗುವಂತಹ ನೀತಿಗಳ ಬಗ್ಗೆ ಯೋಚಿಸಿ, ಸಲಹೆ ನೀಡುವತ್ತ ಗಮನಹರಿಸಬೇಕು. ಸಚಿವರು ತಮ್ಮ ಇಲಾಖೆ ಹಾಗೂ ಉಸ್ತುವಾರಿ ಜಿಲ್ಲೆಗಳ ಬಗ್ಗೆ ಗಮನಹರಿಸಬೇಕು. ಅಧಿಕಾರ ಹಂಚಿಕೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಂತಿಲ್ಲ. ಆ ರೀತಿ ಮಾತನಾಡುವುದು ಪಕ್ಷದ ಶಿಸ್ತು ಉಲ್ಲಂಘಿಸಿದಂತಾಗುತ್ತದೆ‘ ಎಂದರು.

ADVERTISEMENT

ಅಶಿಸ್ತಿನ ಹೆಳಿಕೆಗಳನ್ನು ಪಕ್ಷ ಸಹಿಸುವುದಿಲ್ಲ. ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಯಾರೇ ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ವಿಪ್ ಜಾರಿ ಮಾಡಬೇಕಾಗುತ್ತದೆ. ನಿಮ್ಮ ಧ್ವನಿಗೆ ಪಕ್ಷದಲ್ಲಿ ಅವಕಾಶವಿದೆ. ನೀವು ನಿಮ್ಮ ದೂರು, ಸಲಹೆ, ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಅಥವಾ ನನ್ನ ಬಳಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕೇ ಹೊರತು ಸಾರ್ವಜನಿಕವಾಗಿ ಅಲ್ಲ ಎಂದು ಹೇಳಿದರು.

ಇಂದು ನಡೆದ ಸುದೀರ್ಘ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ತಯಾರಿ ಕುರಿತು ಚರ್ಚೆ ಮಾಡಲಾಯಿತು. ಕರ್ನಾಟಕ ರಾಜ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯ ಕೇಂದ್ರವಾಗಿದೆ. ಸಂಸತ್ ಚುನಾವಣೆಯಲ್ಲಿ ರಾಜ್ಯದ ಜನ 20ಕ್ಕೂ ಹೆಚ್ಚು ಸಂಸದರನ್ನು ಆಯ್ಕೆ ಮಾಡುವ ವಿಶ್ವಾಸ ನಮಗಿದೆ. ನಾವು 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶ್ರಮಿಸುವುದಾಗಿ ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರು ನಮಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಜನರು ಸಂತೋಷವಾಗಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ನಮಗೆ ಗೆಲವು ನಿಶ್ಛಿತವಾಗಿದೆ. ಇಂದು ಕರ್ನಾಟಕ ರಾಜ್ಯೋತ್ಸವ ದಿನವಾಗಿದ್ದು, ಈ ಪವಿತ್ರ ದಿನ ಎಲ್ಲಾ ಕನ್ನಡಿಗರಿಗೂ ಶುಭಕೊರುತ್ತೇನೆ. ಈ ರಾಜ್ಯವನ್ನು ನಾವೆಲ್ಲ ಒಟ್ಟಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯೋಣ ಎಂದು ಹೇಳಿದರು.

ಮುಂದಿನ 15 ದಿನಗಳಲ್ಲಿ ಸಂಸತ್ ಚುನಾವಣೆ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಹೆಸರು ಸೂಚಿಸಲು ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲಿ ಸಭೆಗಳನ್ನು ನಡೆಸಲು ತಿಳಿಸಿದ್ದೇವೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ತಳಮಟ್ಟದಲ್ಲಿ ಪರಿಣಾಮಕಾರಿ ಜಾರಿ ಮಾಡಿ ಜನರಿಗೆ ತಲುಪಿಸಲು ನಿರಂತರವಾಗಿ ಗ್ಯಾರಂಟಿ ಯೋಜನೆಗಳನ್ನು ನಾವು ಪರಿಶೀಲನೆ ಮಾಡುತ್ತೇವೆ. ಈ ಯೋಜನೆಗಳ ಜಾರಿಗೆ ಎಲ್ಲೇ ತೊಂದರೆ ಆದರೂ ಅದಕ್ಕೆ ಸಂಬಂಧಿಸಿದ ಸಚಿವರುಗಳು ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.

ಇನ್ನು ನಿಗಮ ಮಂಡಳಿಗಳ ನೇಮಕ ಬಗ್ಗೆ ಇಂದು ಚರ್ಚೆ ಮಾಡಲಾಯಿತು. ಈ ವಿಚಾರವಾಗಿ ಇನ್ನು ನಾಲ್ಕೈದು ಸುತ್ತಿನ ಚರ್ಚೆ ನಡೆಯಬೇಕಿದೆ. ಸದ್ಯ ನನಗೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಜವಾಬ್ದಾರಿ ವಹಿಸಿದ್ದು, ಇದೇ ತಿಂಗಳು 17ರಂದು ಚುನಾವಣೆ ಪೂರ್ಣಗೊಂಡ ತಕ್ಷಣವೇ ನಾನು ಕರ್ನಾಟಕಕ್ಕೆ ಆಗಮಿಸಿ ನಿಗಮಮಂಡಳಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದು ನುಡಿದರು.

ಪಕ್ಷದ ಸಂಘಟನೆ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆ ಉತ್ತರಿಸಿದ ಅವರು, ‘ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಎಐಸಿಸಿ ಅಧ್ಯಕ್ಷರ ಗಮನಕ್ಕೆ ತರಲಾಗುವುದು. ಹಾಲಿ ಪದಾಧಿಕಾರಿಗಳ ಪೈಕಿ ಹಲವರು ಶಾಸಕರು, ಸಚಿವರುಗಳಾಗಿದ್ದಾರೆ. ಅವರಿಗೆ ಸಂಘಟನಾ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕಿದೆ. ಯುವಕರು, ಹೊಸಬರಿಗೆ ಸಂಘಟನೆಯ ಜವಾಬ್ದಾರಿ ನೀಡಲು ಚಿಂತನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.