ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಗಾದಿ ವಿಚಾರ ಕಾಂಗ್ರೆಸ್‌ನಲ್ಲಿ ಮತ್ತೆ ಮುಂಚೂಣಿಗೆ ಬಂದಿದೆ.
ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭಾನುವಾರ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯಾಗುವ ಕನಸು ಬಿಚ್ಚಿಟ್ಟಿರುವುದು ಇದೀಗ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಒಕ್ಕಲಿಗ ಸಮುದಾಯದ ಸಭೆಯಲ್ಲಿ ಮಾತನಾಡಿದ ಶಿವಕುಮಾರ್, ‘ಇವತ್ತು ನಮಗೆ ಒಂದು ಅವಕಾಶ ಸಿಕ್ಕಿದೆ. ಇಂದು ನಮ್ಮ ಮನೆ ಬಾಗಿಲಿಗೆ ಬೆಳಕು ಹರಿದು ಬಂದಿದೆ. ಅದನ್ನು ನೀವು ರಾಜಕೀಯವಾಗಿ ಬಳಸಿಕೊಳ್ಳಬೇಕು. ನಿಮ್ಮ ಸ್ಫೂರ್ತಿ, ಆತ್ಮವಿಶ್ವಾಸ ನೋಡುತ್ತಿದ್ದರೆ ವಿಧಾನಸೌಧದಲ್ಲಿ ಕುಳ್ಳಿರಿಸುವ ರೀತಿ ಇದೆ. ಏನು ಮಾಡುತ್ತೀರೋ ಗೊತ್ತಿಲ್ಲ, ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದೆ, ಕಳೆದುಕೊಳ್ಳಬೇಡಿ’ ಎಂದಿದ್ದಾರೆ. ಆ ಮೂಲಕ, ಬೆನ್ನಿಗೆ ನಿಂತು ಸಿ.ಎಂ ಮಾಡಿ ಎಂದು ಪರೋಕ್ಷವಾಗಿ ಕೋರಿದ್ದಾರೆ.
ಮತ್ತೊಂದಡೆ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿಯೇ ‘ಸಿದ್ದರಾಮಯ್ಯ ಮುಂದಿನ ಸಿಎಂ’ ಎಂಬ ಘೋಷಣೆ ಮೊಳಗಿದೆ. ಸಿದ್ದರಾಮಯ್ಯ ಅವರ ಆಪ್ತ, ಹೆಬ್ಬಾಳ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಅವರು, ‘ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ’ ಎಂದು ಘೋಷಿಸಿದ್ದಾರೆ.
ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಯಾರೂ ಮಾತನಾಡಬಾರದು ಎಂದು ಈ ಹಿಂದೆಯೇ ಪಕ್ಷದ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.