ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ವಿಶೇಷ ನ್ಯಾಯಾಲಯಕ್ಕೆ?

ಕಾನೂನು ತಜ್ಞರ ಜತೆ ಚರ್ಚಿಸಿ ಕ್ರಮ: ದಯಾನಂದ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 1:12 IST
Last Updated 11 ಸೆಪ್ಟೆಂಬರ್ 2024, 1:12 IST
ಬಿ.ದಯಾನಂದ
ಬಿ.ದಯಾನಂದ   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯ ಅಥವಾ ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು 3,991 ಪುಟಗಳ ಆರೋಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯದ (ಸಿಎಫ್‌ಎಲ್‌) ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ಬಂದ ಬಳಿಕ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಈಗಾಗಲೇ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಎಫ್‌ಎಸ್‌ಎಸ್‌ಎಲ್, ಸಿಎಫ್‌ಎಸ್‌ಎಲ್ ವರದಿಗಳು, ಪ್ರತ್ಯಕ್ಷ ಸಾಕ್ಷಿಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಆರೋಪಿಗಳು ಕೃತ್ಯವೆಸಗಿರುವುದಕ್ಕೆ ಪ್ರಮುಖ ಸಾಕ್ಷ್ಯಗಳು ದೊರೆತಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದಯಾನಂದ ಹೇಳಿದರು.

‘ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಆರೋಪಿ ದರ್ಶನ್ ಹಾಗೂ ಸಹಚರರಿಗೆ ವಿಶೇಷ ಆತಿಥ್ಯ ನೀಡಿರುವ ವಿಚಾರ ಸಂಬಂಧ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆ ಪ್ರಗತಿಯಲ್ಲಿದೆ. ಅಧಿಕಾರಿಗಳ ಪಾತ್ರ, ಜೈಲಿನಲ್ಲಿರುವ ಲೋಪದೋಷಗಳು, ನಿಯಮ ಉಲ್ಲಂಘಿಸಲು ಏನು ಕಾರಣ, ಜೈಲು ಸುಧಾರಣೆಗೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವುದೂ ಸೇರಿದಂತೆ ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಚಂದ್ರಗುಪ್ತ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ನಿರ್ದೇಶಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ವರದಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಪತ್ನಿಗೆ ಕರೆ ಮಾಡಿದ ದರ್ಶನ್

‘ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾದ ಕಾರಣ ಬಳ್ಳಾರಿ ಜೈಲಿನಿಂದ ನಟ ದರ್ಶನ್‌ ಅವರು ಪತ್ನಿ ವಿಜಯಲಕ್ಷ್ಮಿ ಅವರಿಗೆ ಮಂಗಳವಾರ ಕರೆ ಮಾಡಿ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ‘ಮುಂದಿನ ಕಾನೂನು ಪ್ರಕ್ರಿಯೆಗಳ ಕುರಿತು ಚರ್ಚಿಸುವ ಸಲುವಾಗಿ ಪತ್ನಿ ವಿಜಯಲಕ್ಷ್ಮಿ ಮತ್ತು ತಾಯಿ ಮೀನಾ ಅವರನ್ನು  ಬುಧವಾರ (ಸೆ. 11) ಬಳ್ಳಾರಿ ಜೈಲಿಗೆ ಬರುವಂತೆ ದರ್ಶನ್ ತಿಳಿಸಿದ್ದಾರೆ. ಈ ಬಗ್ಗೆ ಬಳ್ಳಾರಿ ಜೈಲು ಅಧಿಕಾರಿಗಳಿಗೂ ನಟನ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ‘ಪ್ರಿಸನ್​ ಕಾಲ್​ ಸಿಸ್ಟಮ್’​ ಮೂಲಕ ದೂರವಾಣಿ ಕರೆ ಮಾಡಿ ಪತ್ನಿ ಜೊತೆ 5 ನಿಮಿಷ ಮಾತನಾಡಿದ್ದಾರೆ’ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.