ADVERTISEMENT

ಅಮಾನ್ಯ ನೋಟು ವಿಲೇವಾರಿ | ಕೇಂದ್ರದ ಮಾರ್ಗಸೂಚಿ ಪಾಲಿಸಿ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 23:30 IST
Last Updated 5 ಅಕ್ಟೋಬರ್ 2024, 23:30 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ಅಮಾನ್ಯಗೊಂಡ ನೋಟುಗಳ ವಿಲೇವಾರಿ ಮತ್ತು ವಿನಿಮಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2017ರಲ್ಲಿ ಹೊರಡಿಸಿರುವ ಮಾರ್ಗ ಸೂಚಿಗಳನ್ನು ಅನುಸರಿಸಬೇಕು’ ಎಂದು ವಿಚಾರಣಾ ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಕಲಬುರಗಿ ಪೀಠದ ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅಮಾನ್ಯಗೊಂಡ ನೋಟುಗಳ ವಿಲೇವಾರಿ, ನ್ಯಾಯಾಲಯದಿಂದ ಬಿಡುಗಡೆ ಮತ್ತು ವಿನಿಮಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹಲವು ಷರತ್ತುಗಳನ್ನು ಒಳಗೊಂಡಂತೆ ವಿವರವಾದ ಮಾರ್ಗಸೂಚಿಯನ್ನು 2017ರ ಮೇ 12ರಂದು ಹೊರಡಿಸಿದೆ. 2016ರ ಡಿಸೆಂಬರ್ 30ಕ್ಕೂ ಮೊದಲು ತನಿಖಾ ಸಂಸ್ಥೆಗಳು ಸಲ್ಲಿಸಿರುವ ಅಮಾನ್ಯಗೊಂಡ ನೋಟುಗಳಿಗೆ ಕೇಂದ್ರದ ನಿಯಮವೇ ಅನ್ವಯವಾಗಲಿದೆ. ಹಾಗಾಗಿ, ತನಿಖಾ ಸಂಸ್ಥೆಗಳು ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದು ನ್ಯಾಯಪೀಠ ವಿವರಿಸಿದೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಸಂಜು ಕುಮಾರ್‌ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಆರ್‌ಬಿಐ ಮೇಲ್ಮನವಿ ಸಲ್ಲಿಸಿತ್ತು.

‘ಅಮಾನ್ಯಗೊಂಡ ಕರೆನ್ಸಿಗಳನ್ನು ಕಾನೂನು ಬದ್ಧ ಟೆಂಡರ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ವಿನಂತಿಯನ್ನು ಪರಿಗಣಿಸಲಾಗುವುದಿಲ್ಲ. ಇದನ್ನು ಕೇಂದ್ರ ಸರ್ಕಾರ ಮಾತ್ರವೇ ಪರಿಗಣಿಸಬಹುದು’ ಎಂದು ಆರ್‌ಬಿಐ ಪರ ವಕೀಲರು ಮೇಲ್ಮನವಿ ವಿಚಾರಣೆಯಲ್ಲಿ ಬಲವಾಗಿ ಪ್ರತಿಪಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.