ADVERTISEMENT

‘ಅನರ್ಹರು ನ್ಯಾಯಾಲಯ ಮೊರೆ ಹೋಗಬಹುದು’

ಚುನಾವಣಾ ಆಯೋಗಕ್ಕೆ ಅನರ್ಹತೆಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:51 IST
Last Updated 25 ಜುಲೈ 2019, 19:51 IST
   

ಬೆಂಗಳೂರು: ಅನರ್ಹಗೊಂಡಿರುವ ಮೂವರು ಶಾಸಕರು ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ನ ಮೊರೆ ಹೋಗಲು ಅವಕಾಶವಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಸದಸ್ಯರು 15 ನೇ ವಿಧಾನಸಭೆಗೆ ಮತ್ತೊಮ್ಮೆ ಆಯ್ಕೆ ಆಗಲು ಸಾಧ್ಯವಿಲ್ಲ, 16 ನೇ ವಿಧಾನಸಭೆಗೆ ಆಯ್ಕೆ ಆಗಲು ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಒಂದು ವೇಳೆ 15 ನೇ ವಿಧಾನಸಭೆಯು ತಕ್ಷಣದಲ್ಲಿ ವಿಸರ್ಜನೆಗೊಂಡು ಚುನಾವಣೆ ಎದುರಾದರೆ ಸ್ಪರ್ಧಿಸಲು ಅವಕಾಶವಿದೆ. ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸಿರುವುದರಿಂದ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ನುಣುಚಿಕೊಂಡ ಸಭಾಧ್ಯಕ್ಷರು: ಮೂವರು ಶಾಸಕರನ್ನು ಅನರ್ಹಗೊಳಿಸಿರುವ ಬೆನ್ನಲ್ಲಿ ರಾಜೀನಾಮೆ ನೀಡಿರುವ ಶಾಸಕರು ರಾಜೀನಾಮೆ ಪತ್ರ ವಾಪಸ್‌ ಪಡೆಯಲು ಅವಕಾಶ ಇದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡದೇ ನುಣುಚಿಕೊಂಡರು. ಇಂತಹ ಕಾಲ್ಪನಿಕ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ. ಯಾವ ಉದ್ದೇಶದಿಂದ ಕೇಳುತ್ತಿದ್ದೀರಿ ಎಂಬುದನ್ನು ಬಲ್ಲೆ, ಆದರೆ, ಉತ್ತರ ನೀಡುವುದಿಲ್ಲ ಎಂದರು.

ಸಭಾಧ್ಯಕ್ಷರಿಗೆ ಅಹವಾಲು ಕೇಳುವ ಅವಕಾಶ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸಾರ್ವಜನಿಕರಿಂದ ಅಹವಾಲು ಕೇಳುವ ಪರಿಪಾಠ ನಾನು ಆರಂಭಿಸಿ ಇತಿಹಾಸ ಸೃಷ್ಟಿಸಿದ್ದೇನೆ. ಇದು ಬೇಡ ಎನ್ನುವವರು ಬೇಕಿದ್ದರೆ ಕಾನೂನಿನಲ್ಲಿ ಬದಲಾವಣೆ ಮಾಡಿಕೊಳ್ಳಲಿ. ಜವಾಬ್ದಾರಿ ಇಲ್ಲದೆ ನಾಲಗೆ ಹರಿ ಬಿಡಬೇಡಿ ಎಂದೂ ಟೀಕಾಕಾರರನ್ನು ರಮೇಶ್‌ ಕುಮಾರ್‌ ತರಾಟೆಗೆ ತೆಗೆದುಕೊಂಡರು.

ಈ ಪ್ರಕರಣಗಳಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಬಗ್ಗೆ ಗೊತ್ತಿದ್ದರೂ ಚಾಪೆಯಡಿ ನುಸುಳುವ ಮಾರ್ಗ ಅನುಸರಿಸಿರುವುದು ಸ್ಪಷ್ಟವಾಗಿದೆ ಎಂದರು.

ಸಭಾಧ್ಯಕ್ಷರನ್ನು ಇಳಿಸುವುದು ಸುಲಭವಲ್ಲ: ಸಭಾಧ್ಯಕ್ಷರನ್ನು ಇಳಿಸುವುದು ಸುಲಭವಲ್ಲ. ಅದಕ್ಕೂ ಒಂದು ವಿಧಾನವಿದೆ. ಸಭಾಧ್ಯಕ್ಷರನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ನೋಟಿಸ್‌ ನೀಡಬೇಕಾಗುತ್ತದೆ. 15 ದಿನಗಳ ಬಳಿಕ ಅದನ್ನು ಮತಕ್ಕೆ ಹಾಕಲಾಗುತ್ತದೆ. ಬಹುಮತ ಸಿಕ್ಕರೆ ಉಳಿಯುತ್ತೇನೆ. ಇಲ್ಲವೆಂದರೆ ಮನೆಗೆ ಹೋಗಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಮೂವರು ಶಾಸಕರು ಅನರ್ಹರಾಗಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುತ್ತೇವೆ. ಅವರು ಸಮಯ ನೋಡಿಕೊಂಡು ಚುನಾವಣೆ ದಿನಾಂಕವನ್ನು ನಿಗದಿ ಮಾಡಬಹುದು ಎಂದು ರಮೇಶ್‌ ಕುಮಾರ್‌ ತಿಳಿಸಿದರು.

‘ಸಹಕರಿಸಿದರೆ ಧನವಿನಿಯೋಗ ಅಂಗೀಕಾರ ಸಾಧ್ಯ’

ಧನ ವಿನಿಯೋಗ ಮಸೂದೆಗೆ ಒಪ್ಪಿಗೆ ಸಿಗದಿರುವ ಕಾರಣ ಸರ್ಕಾರದ ಯೋಜನೆಗಳು ನಿಂತು ಹೋಗುತ್ತವೆ. ಇದನ್ನು ತಪ್ಪಿಸಲು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಒಂದು ದಿನದ ಅಧಿವೇಶನ ಕರೆದು ಮಸೂದೆಗೆ ಒಪ್ಪಿಗೆ ಪಡೆಯಬಹುದು ಎಂದು ಸಭಾಧ್ಯಕ್ಷ ರಮೇಶ್‌ ಕುಮಾರ್‌ ತಿಳಿಸಿದರು.

‘ಕೋರ್ಟ್‌ ತಡೆ ನೀಡಿದರೆ ಸ್ಪರ್ಧಿಸಬಹುದು’

ಬೆಂಗಳೂರು: ‘ಅನರ್ಹಗೊಂಡಿರುವ ಶಾಸಕರು ವಿಧಾನಸಭಾಧ್ಯಕ್ಷರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆಹೋಗಬಹುದು’ ಎಂಬುದು ಕಾನೂನು ತಜ್ಞರ ಅಭಿಮತ.

’ವಾಸ್ತವದಲ್ಲಿ ವಿಧಾನಸಭಾಧ್ಯಕ್ಷರ ಆದೇಶವನ್ನು ಹೈಕೋರ್ಟ್‌ನಲ್ಲೇ ಮೊದಲು ಪ್ರಶ್ನಿಸಬೇಕು. ಆದರೆ, ಈ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟ್‌ ಮುಂದೆ ವಿಚಾರಣೆಗೆ ಬಾಕಿ ಇರುವ ಕಾರಣ ನೇರವಾಗಿ ಅಲ್ಲಿಗೇ ಹೋಗಬಹುದು’ ಎನ್ನುತ್ತಾರೆ ಹಿರಿಯ ವಕೀಲರು.

‘ವಿಧಾನಸಭಾಧ್ಯಕ್ಷರ ಆದೇಶಕ್ಕೆ ತಡೆ ನೀಡಿದರೆ ಅನರ್ಹಗೊಂಡಿರುವ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು’ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

* ಜೀವಂತ ಇರುವವರಿಗೆ ಮಾನ ಮುಚ್ಚಲು ಬಟ್ಟೆ ಹಾಕಬಹುದು, ಶವಗಳಿಗೆ ಹಾಕಿದರೂ ಬಿಟ್ಟರೂ ಒಂದೇ

- ಕೆ.ಆರ್‌.ರಮೇಶ್‌ ಕುಮಾರ್, ಸಭಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.