ADVERTISEMENT

ಹಿಂದುತ್ವ ಪ್ರತಿಪಾದಕರಿಗಿಲ್ಲ ಮಣೆ: ಕರಾವಳಿಯ ‘ಕೇಸರಿ’ ಪಡೆಯಲ್ಲಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 20:13 IST
Last Updated 20 ಆಗಸ್ಟ್ 2019, 20:13 IST
ಪ್ರಮಾಣ ವಚನ ಸ್ವೀಕಿರಿಸಿದ ನೂತನ ಸಚಿವರು
ಪ್ರಮಾಣ ವಚನ ಸ್ವೀಕಿರಿಸಿದ ನೂತನ ಸಚಿವರು   

ಬೆಂಗಳೂರು: ಬಿಜೆಪಿಯ ಪಾಲಿಗೆ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಹಿಂದುತ್ವದ ಪ್ರಬಲ ನೆಲೆ. ಅಲ್ಲಿನ ಪ್ರಬಲ ಹಿಂದುತ್ವ ಪ್ರತಿಪಾದಕ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸದ ಬಗ್ಗೆ ಶಾಸಕರಲ್ಲೇ ಅಸಮಾಧಾನ ವ್ಯಕ್ತವಾಗಿದೆ.

ಈ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಧಿಕ ಸ್ಥಾನ ಗೆಲ್ಲಬೇಕಾದರೆ, ಇಲ್ಲಿ ಹಿಂದುತ್ವವೇ ಬಿಜೆಪಿಗೆ ಆಧಾರ. ಈಗ ಮೂಲ ವಿಚಾರಧಾರೆಯ ಶಾಸಕರನ್ನೇ ಕಡೆಗಣಿಸಿರುವುದು ಕರಾವಳಿಯ ಸಂಘ ಪರಿವಾರದಲ್ಲಿ ಚಿಂತೆಗೀಡು ಮಾಡಿದೆ. ಇದು ಭವಿಷ್ಯದಲ್ಲಿ ಚುನಾವಣಾ ಸಮರದಲ್ಲಿ ಹಿನ್ನಡೆಗೆ ಕಾರಣವಾಗಬಹುದು ಎಂಬ ವ್ಯಾಖ್ಯಾನ ಸಂಘದ ವಲಯದಲ್ಲಿ ಕೇಳಿ ಬಂದಿದೆ.

ಸುಳ್ಯದ ಎಸ್‌. ಅಂಗಾರ ಮತ್ತು ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿಬಹಿರಂಗವಾಗಿ ಅತೃಪ್ತಿ ತೋಡಿಕೊಂಡಿದ್ದರೂ, ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಇನ್ನೂ ಕೆಲವು ಶಾಸಕರು, ‘ಸಂಪುಟ ವಿಸ್ತರಣೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಅರ್ಹ ಹಿರಿಯ ಶಾಸಕರಿದ್ದರೂ ಅವರನ್ನು ಕಡೆಗಣಿಸಲಾಗಿದೆ. ಇದು ಸರಿಯಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ಕ್ಷೇತ್ರದ ಸುನಿಲ್‌ ಕುಮಾರ್‌ ಮತ್ತು ಕುಂದಾಪುರ ಕ್ಷೇತ್ರದ ಹಾಲಾಡಿ ಶ್ರೀನಿವಾಸ ಶೆಟ್ಟಿ, ದಕ್ಷಿಣಕನ್ನಡದಿಂದ ಸುಳ್ಯ ಕ್ಷೇತ್ರದ ಎಸ್‌.ಅಂಗಾರ ಅವರ ಹೆಸರು ಕೇಳಿ ಬಂದಿತ್ತು. ಅಂಗಾರ ಮತ್ತು ಹಾಲಾಡಿ ಅವರು ಹಿರಿತನಕ್ಕೂ, ಪಕ್ಷದ ಸಂಘಟನೆ ಮತ್ತು ಕರಾವಳಿಯಲ್ಲಿ ಹಿಂದುತ್ವ ಕಾವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಕಾರಣಕ್ಕೆಸುನಿಲ್‌ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು.

ಆದರೆ, ಕೊನೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸ್ಥಾನಕ್ಕೆ ಸೇರ್ಪಡೆಗೊಂಡಿದ್ದು ಎರಡೂ ಜಿಲ್ಲೆಗಳ ಶಾಸಕರಲ್ಲಿ ಅಚ್ಚರಿ ಮೂಡಿಸಿದೆ.

‘ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ದುಡಿದವರನ್ನು(ಸುನಿಲ್) ಕಡೆಗಣಿಸಿದ್ದು ಸರಿಯಲ್ಲ. ಕರಾವಳಿಯ ಮೂರು ಜಿಲ್ಲೆಗಳು, ಮಲೆನಾಡಿನ ಚಿಕ್ಕಮಗಳೂರಿನಲ್ಲಿ ಹಿಂದುತ್ವದ ಹವಾ ಇಲ್ಲದಿದ್ದರೆ, ಬಿಜೆಪಿ ನೆಲೆ ಉಳಿಸಿಕೊಳ್ಳುವುದು ಕಷ್ಟ. ಇಲ್ಲಿನ ಕಾರ್ಯಕರ್ತರು ಹಿಂದುತ್ವಕ್ಕೆ ಬದ್ಧರಾದವರು. ವರಿಷ್ಠರ ನಿರ್ಧಾರದಿಂದ ಕಾರ್ಯಕರ್ತರಿಗೆ ಬೇಸರ ಆಗಿದೆ’ ಎಂದು ಉಡುಪಿ ಜಿಲ್ಲೆಯ ಹಿರಿಯ ಶಾಸಕರೊಬ್ಬರು ಹೇಳಿದರು.

‘ಹಿಂದುತ್ವಕ್ಕಾಗಿ ಶ್ರಮಿಸುತ್ತಿರುವ ಶಾಸಕರಿಗೆ ಒಮ್ಮೆಯೂ ಅವಕಾಶ ನೀಡದಿದ್ದರೆ ಹೇಗೆ. ಇದರಿಂದ ಕಾರ್ಯಕರ್ತರಲ್ಲಿ ಯಾವ ಸಂದೇಶ ಹೋಗುತ್ತದೆ? ಸುನಿಲ್‌ಕುಮಾರ್‌ಗೆ ಈ ಬಾರಿ ಅವಕಾಶ ಸಿಗುತ್ತದೆ, ಪಟ್ಟಿಯಲ್ಲಿ ಅವರ ಹೆಸರೂ ಇದೆ ಎಂಬ ಮಾಹಿತಿ ಇತ್ತು. ಪಟ್ಟಿ ಬಿಡುಗಡೆಗೊಂಡಾಗ ಅಚ್ಚರಿ ಆಗಿತ್ತು. ಯುವಕರಿಗೆ ಈಗ ಅವಕಾಶ ನೀಡದಿದ್ದರೆ, ಮುಂದೆ ಇಳಿ ವಯಸ್ಸಿನಲ್ಲಿ ನೀಡಲು ಸಾಧ್ಯವೇ’ ಎಂದು ದಕ್ಷಿಣಕನ್ನಡ ಜಿಲ್ಲೆಯ ಮತ್ತೊಬ್ಬ ಶಾಸಕ ಪ್ರಶ್ನಿಸಿದರು.

‘ನಾವು ಕರಾವಳಿಯ ಶಾಸಕರು ಬಹಿರಂಗವಾಗಿ ಏನೂ ಹೇಳಿಕೊಳ್ಳುವುದಿಲ್ಲ. ಆರು ಬಾರಿ ಗೆದ್ದ ಅಂಗಾರ, ಐದು ಬಾರಿ ಗೆದ್ದ ಹಾಲಾಡಿಯವರಿಗೆ ಅವಕಾಶ ತಪ್ಪಿಸಲು ಕಾರಣವೇನು? ಬೇರೆ ಯಾವುದೋ ಶಾಸಕರಿಗೆ ಅವಕಾಶ ನೀಡಲು ಈ ಭಾಗದವರು ಎಷ್ಟು ಬಾರಿ ತ್ಯಾಗ ಮಾಡಬೇಕು’ ಎಂಬ ಪ್ರಶ್ನೆ ಅವರದು.

* ಇವನ್ನೂ ಓದಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.