ADVERTISEMENT

ಕರಾವಳಿಗರಿಗೆ ಪಡಿತರದಲ್ಲಿ ಕುಚಲಕ್ಕಿ ವಿತರಣೆ: ಬಸವರಾಜ ಬೊಮ್ಮಾಯಿ

ಬೆಂಬಲ ಬೆಲೆಯಡಿ ಭತ್ತ ಖರೀದ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:36 IST
Last Updated 7 ನವೆಂಬರ್ 2022, 19:36 IST
ಕುಂದಾಪುರ ಸಮೀಪದ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ನಗು ಸಿಟಿಯಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಗೆ ಟ್ರ್ಯಾಕ್ಟರ್ ಹಸ್ತಾಂತರಿಸಿದರು. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಇದ್ದರು
ಕುಂದಾಪುರ ಸಮೀಪದ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ನಗು ಸಿಟಿಯಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಗೆ ಟ್ರ್ಯಾಕ್ಟರ್ ಹಸ್ತಾಂತರಿಸಿದರು. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಇದ್ದರು   

ಉಡುಪಿ: ಕರಾವಳಿ ಭಾಗದಲ್ಲಿ ಬೆಳೆಯುವ ಕುಚಲಕ್ಕಿ ಭತ್ತವನ್ನು ರೈತರಿಂದ ನೇರವಾಗಿ ಖರೀದಿಸಿ ಕರಾವಳಿ ಜಿಲ್ಲೆಗಳ ಬಿಪಿಎಲ್‌ ಕಾರ್ಡ್‌ದಾರರಿಗೆ ಕುಚಲಕ್ಕಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಕಾಪುವಿನಲ್ಲಿ ಬಿಜೆಪಿಯ ಜನಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಪಡಿತರದಲ್ಲಿ ಕುಚಲಕ್ಕಿ ಕೊಡಬೇಕು ಎಂಬ ಕರಾವಳಿಗರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸುತ್ತಿದೆ’ ಎಂದು ಹೇಳಿದರು.

ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸುವ ಕುರಿತು ಬೆಂಗಳೂರಿಗೆ ತೆರಳಿದ ಕೂಡಲೇ ಸಭೆ ನಡೆಸಿ ಮುಂದಿನ ವಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ADVERTISEMENT

ಆಳಸಮುದ್ರ ಮೀನುಗಾರಿಕೆಗೆ ಅನುಕೂಲ ಆಗುವಂತೆ ಮೀನುಗಾರರಿಗೆ ಮೊದಲ ಹಂತದಲ್ಲಿ 100 ಹೈಸ್ಪೀಡ್ ಬೋಟ್‌ಗಳನ್ನು ನೀಡಲಾಗುವುದು. ಈಗಾಗಲೇ ಫಲಾನುಭವಿಗಳ ಆಯ್ಕೆ ನಡೆದಿದ್ದು ಸರ್ಕಾರದಿಂದ ಶೇ 40 ಸಹಾಯಧನ ಸಿಗಲಿದೆ. ಮೀನುಗಾರರು ಶೇ 10ರಷ್ಟು ಬಂಡವಾಳ ಹಾಕಿದರೆ ₹ 1.5 ಕೋಟಿ ಮೌಲ್ಯದ ದೊಡ್ಡ ಹೈಸ್ಪೀಡ್ ಬೋಟ್‌ ಸಿಗಲಿದೆ ಎಂದು ಹೇಳಿದರು.

ಕ್ಷೇತ್ರ ಉಳಿಸಿಕೊಳ್ಳಲಿ: ಬಿಜೆಪಿ ಅಧಿಕಾರಕ್ಕೆ ಬರುವುದು ಸತ್ಯ: ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯಿಸು
ವುದು ಎಷ್ಟು ಸತ್ಯವೋ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೆ ಸತ್ಯ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ದೂರದ ಮಾತು. ಕಾಂಗ್ರೆಸ್‌ ನಾಯಕರು ಮೊದಲು ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

ಸಾಮಾಜಿಕ ನ್ಯಾಯ ಕಾಂಗ್ರೆಸ್‌ನ ಭಾಷಣದ ಸರಕಾಗಿದೆ. ಹಿಂದುಳಿದ ವರ್ಗಗಳ ಹೊಟ್ಟೆ ತುಂಬಿಸಲು ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಅವರು ತಾವು ಮುಂದೆ ಹೋದರೆ ಹೊರತು ಅಹಿಂದವನ್ನು ಹಿಂದೆ ತಳ್ಳಿದ್ದಾರೆ. ಹಿಂದುಳಿದ ವರ್ಗ ಕಾಂಗ್ರೆಸ್‌ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಅವರು ವಾಗ್ದಾಳಿ ನಡೆಸಿದರು.

*
ಸುರತ್ಕಲ್‌ ಟೋಲ್ ಗೇಟ್‌ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ನೀಡಲಾಗಿದೆ. ಮುಂದಿನ ಕ್ರಮವನ್ನು ಆ ಪ್ರಾಧಿಕಾರವೇ ತೆಗೆದುಕೊಳ್ಳಲಿದೆ.
-ಬಸವರಾಜ ಬೊಮ್ಮಾಯಿ,‌ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.