ADVERTISEMENT

ಪ್ಲಾಂಟೇಷನ್‌ ವಿಭಜಿಸಿ, ಮಾರಾಟಕ್ಕೆ ಕಂದಾಯ ಇಲಾಖೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:22 IST
Last Updated 8 ಅಕ್ಟೋಬರ್ 2024, 16:22 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪ್ಲಾಂಟೇಷನ್‌ ಜಮೀನುಗಳನ್ನು ಚಿಕ್ಕ–ಚಿಕ್ಕ ಹಿಸ್ಸೆಗಳಾಗಿ ವಿಂಗಡಿಸಿ, ಮಾರಾಟ ಮಾಡುವುದನ್ನು ನಿರ್ಬಂಧಿಸಿ ಕಂದಾಯ ಇಲಾಖೆ ಆದೇಶಿಸಿದೆ.

ಹೋಂಸ್ಟೇ, ರೆಸಾರ್ಟ್‌ ಸ್ಥಾಪಿಸುವುದು ಮತ್ತು ನಿವೇಶನ ಅಭಿವೃದ್ಧಿಪಡಿಸುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ADVERTISEMENT

‘ಕೇರಳದ ವಯನಾಡು, ರಾಜ್ಯದ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಪ್ಲಾಂಟೇಷನ್‌ ಜಮೀನಿನಲ್ಲಿ ಹೋಂ ಸ್ಟೇ, ರೆಸಾರ್ಟ್‌ ನಿರ್ಮಿಸಿದ್ದೂ ಈಚೆಗೆ ಭಾರಿ ಭೂಕುಸಿತಗಳಿಗೆ ಕಾರಣವಾಗಿತ್ತು. ಇದನ್ನು ತಪ್ಪಿಸಲು ಪ್ಲಾಂಟೇಷನ್‌ ವಿಸ್ತೀರ್ಣಕ್ಕೆ ಕನಿಷ್ಠ ಮಿತಿ ಹೇರಲಾಗಿದೆ’ ಎಂದು ಆದೇಶ ಹೇಳಿದೆ.

‘ಒಂದೇ ಸರ್ವೆ ಸಂಖ್ಯೆಯಲ್ಲಿ 5 ಎಕರೆಗಿಂತ ಕಡಿಮೆ ಇರುವ ಭೂವಿಭಜನೆ–11ಇ ಅರ್ಜಿಗಳನ್ನು ಮಾನ್ಯ ಮಾಡಬಾರದು. 11ಇ ಅಡಿಯಲ್ಲಿ ನಕ್ಷೆಗಳನ್ನು ತಯಾರಿಸಬಾರದು. ಅಂತಹ ಜಮೀನುಗಳಿಗೆ ಹೊಸ ಹಿಸ್ಸಾಗಳನ್ನು ನೀಡುವಂತಿಲ್ಲ. ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಖರೀದಿಸುವಾಗ ತಲಾ ಕನಿಷ್ಠ 5 ಎಕರೆ ಇದ್ದರಷ್ಟೇ 11ಇ ಅಡಿಯಲ್ಲಿ ಹಿಸ್ಸಾ ನೀಡಬಹುದು’ ಎಂದು ವಿವರಿಸಿದೆ.

‘ಈವರೆಗೆ ಹಿಸ್ಸಾ ಆಗಿರುವ ಮತ್ತು ಮಾರಾಟವಾಗಿರುವ ಪ್ಲಾಂಟೇಷನ್‌ಗಳಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ. ಮುಂದಿನ ವಹಿವಾಟುಗಳಿಗಷ್ಟೇ ಇದು ಅನ್ವಯವಾಗುತ್ತದೆ’ ಎಂದು ತಿಳಿಸಿದೆ.

ಕಾಫಿ ತೋಟಗಳನ್ನು ಲೇಔಟ್‌ಗಳಾಗಿ ಪರಿವರ್ತಿಸುತ್ತಿರುವ ಕುರಿತು ‘ಕಾಫಿ ತೋಟ, ಮಾಫಿಯಾ ಆಟ’ ಶೀರ್ಷಿಕೆಯಡಿ ಪ್ರಜಾವಾಣಿ ಕೆಲ ತಿಂಗಳ ಹಿಂದೆ ಒಳನೋಟ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.