ADVERTISEMENT

ಮುನಿರತ್ನ ಪ್ರಕರಣದ ಹಿಂದೆ ಡಿ.ಕೆ ಶಿವಕುಮಾರ್: ಶಾಸಕ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 14:20 IST
Last Updated 16 ಸೆಪ್ಟೆಂಬರ್ 2024, 14:20 IST
ಶಾಸಕ ರಮೇಶ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಶಾಸಕ ರಮೇಶ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್   

ಅಥಣಿ: ‘ಮುನಿರತ್ನ ಪ್ರಕರಣದ ಹಿಂದೆ ಸಿ.ಡಿ ಶಿವು ಇದ್ದಾನೆ. ಅವನ ವಿರೋಧಿಗಳೆಲ್ಲ ಜೈಲಿನಲ್ಲಿದ್ದಾರೆ. ಈ ಕೆಲಸ ಬಿಟ್ಟರೆ, ಅವನಿಗೆ ಬೇರೇನೂ ಗೊತ್ತಿಲ್ಲ’ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ಕಂಪನಿಯವರು ಮೊದಲು ನನ್ನ ಬಲಿ ಪಡೆದರು. ನಂತರ ದೇವೇಗೌಡರ ಕುಟುಂಬದ ಬಲಿ ಪಡೆದರು. ಈಗ ಮುನಿರತ್ನ ಬಲಿ ಪಡೆದಿದ್ದಾರೆ’ ಎಂದರು.

‘ಸಿ.ಡಿ ಶಿವು ಹೋರಾಟದಿಂದ ಬೆಳೆದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯನಾಗಲೂ ಅರ್ಹತೆ ಇಲ್ಲ. ಹೊಂದಾಣಿಕೆ ರಾಜಕಾರಣಿ ಆದ ಕಾರಣ, ಏಳೆಂಟು ಬಾರಿ ಶಾಸಕನಾಗಿದ್ದಾನೆ. ಈಗ ಮತ್ತೆ ಚುನಾವಣೆಯಾದರೆ ಆತ ಸೋಲುತ್ತಾನೆ’ ಎಂದರು.

ADVERTISEMENT

‘ದಲಿತರು ಮತ್ತು ಒಕ್ಕಲಿಗರಿಗೆ ಮುನಿರತ್ನ ಅವರು ಬಯ್ದಿದ್ದು ಇನ್ನೂ ದೃಢಪಟ್ಟಿಲ್ಲ. ಆ ಆಡಿಯೊ ಕಟ್‌ ಆ್ಯಂಡ್‌ ಪೇಸ್ಟ್‌ ಇರಬಹುದು. ಎಫ್‌ಎಸ್‌ಎಲ್ ವರದಿ ಬರುವವರೆಗೆ ನಮ್ಮ ಪಕ್ಷದವರೂ ಮುನಿರತ್ನ ವಿರುದ್ಧ ಮಾತನಾಡಬಾರದು. ಬಿಜೆಪಿಯವರೇ ನಮ್ಮ ಪಕ್ಷದ ಶಾಸಕನನ್ನು ಬಯ್ಯುವುದು ಎಷ್ಟರಮಟ್ಟಿಗೆ ಸರಿ? ಬಿಜೆಪಿಯಲ್ಲೇ ಇದ್ದುಕೊಂಡು ಮುನಿರತ್ನ ವಿರುದ್ಧ ಹೇಳಿಕೆ ಕೊಡುವವರಿಗೆ ಪಕ್ಷದ ವರಿಷ್ಠರು ನೋಟಿಸ್ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಉಮೇಶ ಕತ್ತಿ ಹತ್ತು ಸಲ ಜೈಲಿಗೆ ಹೋಗಬೇಕಾಗುತ್ತಿತ್ತು

‘ನಾನು ಮತ್ತು ಉಮೇಶ ಕತ್ತಿ ಬೇರೆ ಬೇರೆ ಪಕ್ಷದಲ್ಲಿದ್ದಾಗ, ಪರಸ್ಪರ ಜಾತಿ ನಿಂದನೆ ಮಾಡುತ್ತಿದ್ದೆವು. ನನ್ನ ಜಾತಿಯನ್ನು ಅವರು, ಉಮೇಶ ಜಾತಿಯನ್ನು ನಾನು ನಿಂದಿಸುತ್ತಿದ್ದೆ. ಸ್ನೇಹಿತರು ಸಹಜವಾಗಿ ಮಾತನಾಡುತ್ತಾರೆ. ಜಾತಿ ವಿಚಾರವಾಗಿ ಸಾವಿರಾರು ಮಂದಿಗೆ ಬಯ್ದರೆ ಅದು ಅಪರಾಧ. ಹೀಗಿರುವಾಗ ಮುನಿರತ್ನ ಮಾತನಾಡಿದ್ದನ್ನು ಆಡಿಯೊ ಮಾಡಿಬಿಟ್ಟರೆ ಹೇಗೆ’ ಎಂದು ಪ್ರಶ್ನಿಸಿದರು.

‘ನಾನು ಜಾತಿ ನಿಂದನೆ ವಿಚಾರವಾಗಿ ದೂರು ದಾಖಲಿಸಿದ್ದರೆ, ಉಮೇಶ ಕತ್ತಿ ಹತ್ತು ಬಾರಿ ಜೈಲಿಗೆ ಹೋಗಬೇಕಾಗುತ್ತಿತ್ತು. ಹೀಗಾದರೆ ರಾಜಕಾರಣ ಮಾಡುವುದು ಹೇಗೆ?’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.