ಬೆಂಗಳೂರು: ‘ಐಎಎಸ್ ಅಧಿಕಾರಿಗಳನ್ನು ಹಿರಿಯ ನಾಯಕರಿಗೆ ಶಿಷ್ಟಾಚಾರ ಪ್ರಕಾರ ನೇಮಿಸಲಾಗಿದೆ. ಈ ಪದ್ಧತಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಾನು ಕುಮಾರಸ್ವಾಮಿ ಅವರಿಗೆ ಉತ್ತರ ಕೊಡಲು ತಯಾರಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬಿಜೆಪಿಯೇತರ ಪಕ್ಷಗಳ ಮಹಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ಹೊರ ರಾಜ್ಯಗಳಿಂದ ಬಂದ ರಾಜಕಾರಣಿಗಳ ಸೇವೆಗೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ಕಳುಹಿಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ದೂರಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ 'ಐಎಎಸ್ ಜೀತ ಪದ್ಧತಿ' ಜಾರಿ: ಕುಮಾರಸ್ವಾಮಿ ಆರೋಪ
ತಾಜ್ ವೆಸ್ಟ್ ಎಂಡ್ ಹೋಟೆಲ್ ಬಳಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಶಿವಕುಮಾರ್, ‘ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಸರ್ಕಾರ ಇರುತ್ತದೆ. ಹೋಗುತ್ತದೆ. ಈಗ ಕುಮಾರಣ್ಣ ಮಾತನಾಡುತ್ತಾರೆ. ಅವರಿಗೂ ನ್ಯೂಸ್ ಬೇಕಲ್ಲವೇ?’ ಎಂದರು.
‘ವಿರೋಧ ಪಕ್ಷಗಳ ನಾಯಕರ ಸಭೆ ನಡೆಯುತ್ತಿದೆ. ಅವರಿಗೆ (ಕುಮಾರಸ್ವಾಮಿ) ಆಹ್ವಾನ ಕೊಟ್ಟಿಲ್ಲ. ಅವರು ಎನ್‌ಡಿಎ ಆಹ್ವಾನಕ್ಕೆ ಕಾಯುತ್ತಿದ್ದೇನೆ ಎಂದಿದ್ದಾರೆ’ ಎಂದೂ ಹೇಳಿದರು.
‘ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ನಿಧನರಾಗಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ನಾಯಕರು ಚಾಂಡಿ ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ. ಹೀಗಾಗಿ, ವಿರೋಧ ಪಕ್ಷಗಳ ನಾಯಕರ ಸಭೆ 15 ನಿಮಿಷಗಳ ಕಾಲ ತಡ ಆಗಬಹುದು’ ಎಂದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಭಿತ್ತಿಪತ್ರ ಅಂಟಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಬಿಜೆಪಿ ಸ್ನೇಹಿತರು ಈ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ. ನಿತೀಶ್ ಕುಮಾರ್ ಅವರು, ತಮ್ಮ ರಾಜಕೀಯ ಮಾಡುತ್ತಿದ್ದಾರೆ. ಭಿತ್ತಿಪತ್ರಗಳನ್ನು ಅಂಟಿಸಿದವರು ಹೇಡಿಗಳು’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.