ADVERTISEMENT

ಶಾಸಕರ ಒತ್ತಡಕ್ಕೆ ಮಣಿಯಬೇಡಿ: ಎಂಜಿನಿಯರ್‌ಗಳಿಗೆ ಡಿ.ಕೆ. ಶಿವಕುಮಾರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 14:25 IST
Last Updated 25 ನವೆಂಬರ್ 2024, 14:25 IST
<div class="paragraphs"><p>ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳಿಗೆ ಕರ್ನಾಟಕ ನೀರಾವರಿ (ತಿದ್ದುಪಡಿ) ಕಾಯ್ದೆ ಕುರಿತು ನಡೆದ ಕಾರ್ಯಾಗಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದರು</p></div>

ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳಿಗೆ ಕರ್ನಾಟಕ ನೀರಾವರಿ (ತಿದ್ದುಪಡಿ) ಕಾಯ್ದೆ ಕುರಿತು ನಡೆದ ಕಾರ್ಯಾಗಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದರು

   

ಬೆಂಗಳೂರು: ‘ನೀರಾವರಿ ಯೋಜನೆಗಳನ್ನು ರೂಪಿಸುವಾಗ ಶಾಸಕರ ಒತ್ತಡಕ್ಕೆ ಮಣಿಯಬೇಡಿ. ಲೆಕ್ಕಾಚಾರ ಹೆಚ್ಚುಕಡಿಮೆಯಾದರೆ, ಅಂತಹ ಯೋಜನೆಗೆ ಅಂದಾಜು ಸಿದ್ಧಪಡಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಮ್ಮ ಇಲಾಖೆಯ ಎಂಜಿನಿಯರ್‌ಗಳಿಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.

‘ಕರ್ನಾಟಕ ನೀರಾವರಿ (ತಿದ್ದುಪಡಿ) ಕಾಯ್ದೆ– 2024’ರ ಕುರಿತು ಇಲಾಖೆಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳಿಗೆ ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಶಾಸಕರು ಹೇಳಿದರು ಎಂಬ ಕಾರಣಕ್ಕೆ ಯೋಜನೆಗಳನ್ನು ಬರೆದು ಕೊಡುತ್ತಿದ್ದೀರಿ. ₹5 ಕೋಟಿವರೆಗೂ ಯೋಜನೆಗಳಿಗೆ ನೀವೇ ಅನುಮತಿ ನೀಡಬಹುದು ಎಂಬ ಕಾರಣಕ್ಕೆ ₹4.99 ಕೋಟಿಯ ಅಂದಾಜು ಬರೆದು ಕೊಡುತ್ತಿದ್ದೀರಿ. ಈ ರೀತಿ ಮಾಡಲು ಹೇಳಿದವರು ಯಾರು’ ಎಂದು ಪ್ರಶ್ನಿಸಿದರು.

ADVERTISEMENT

‘ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವಧಿಯಲ್ಲಿ ಎಲ್ಲವನ್ನೂ ಹಾಳು ಮಾಡಲಾಗಿದೆ. ನೀರಾವರಿ ಯೋಜನೆಗಳಿಗೆ ₹21 ಸಾವಿರ ಕೋಟಿ ಘೋಷಣೆ ಮಾಡಿ, ₹16 ಸಾವಿರ ಕೋಟಿ ನೀಡಲಾಗಿದೆ. ₹ 5 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ಹಿಡಿದಿಟ್ಟುಕೊಂಡಿದೆ. ಆದರೆ, ₹ 1 ಲಕ್ಷ ಕೋಟಿ ಮೊತ್ತದ ಕೆಲಸ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಹೇಗೆ ಸಾಧ್ಯ. ಹೊಸ ಯೋಜನೆ ಕೈಗೆತ್ತಿಕೊಳ್ಳುವುದು ಹೇಗೆ’ ಎಂದೂ ಕೇಳಿದರು.

‘ಬೇರೆಯವರನ್ನು ಮೆಚ್ಚಿಸಲು ಕೆಲಸ ಮಾಡಬೇಡಿ. ನಿಮ್ಮ ಆತ್ಮಸಾಕ್ಷಿ ಮೆಚ್ಚಿಸಲು ಕೆಲಸ ಮಾಡಿ. ಈಗಾಗಲೇ ಆರಂಭಿಸಿದ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಕೆಲವೇ ದಿನಗಳಲ್ಲಿ ಮಂಡಳಿ ಸಭೆ ಇದ್ದು, ₹1 ಲಕ್ಷ ಕೋಟಿಯಷ್ಟು ಯೋಜನೆಗಳಿಗೆ ಮನವಿ ಇದೆ. ಇಲಾಖೆಯಲ್ಲಿ ಇರುವುದೇ ₹16 ಸಾವಿರ ಕೋಟಿ, ಅದರಲ್ಲೂ ಹಳೇ ಯೋಜನೆಯ ಕಾಮಗಾರಿಗಳಿವೆ. ಈ ಪರಿಸ್ಥಿತಿಯಲ್ಲಿ ನಾನು ಯಾರಿಗೆ ಸಹಾಯ ಮಾಡಬೇಕು? ಈ ವಿಚಾರದಲ್ಲಿ ನೀವು ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದರು.

‘ಎತ್ತಿನಹೊಳೆ ಯೋಜನೆ ನೀರು ಕೋಲಾರಕ್ಕೆ ಇನ್ನೂ ಹೋಗಿಲ್ಲ. ಶಾಸಕರು ₹100 ಕೋಟಿ, ₹150 ಕೋಟಿ ಮೊತ್ತದ ಯೋಜನೆಗಳನ್ನು ತರುತ್ತಿದ್ದಾರೆ. ಎಲ್ಲ ಅಣೆಕಟ್ಟುಗಳ ಗೇಟ್‌ಗಳ ದುರಸ್ತಿಗೆ ನಿರ್ಧರಿಸಿದ್ದೇವೆ. ಇದಕ್ಕಾಗಿ ಸಮಿತಿ ರಚಿಸಿ, ವರದಿ ಪಡೆಯಲಾಗಿದೆ’ ಎಂದರು.

‘ನನ್ನ ಅವಧಿಯಲ್ಲಿ ಈ ವಿಚಾರದಲ್ಲಿ ಸುಧಾರಣೆ ತರದಿದ್ದರೆ ಮುಂದೆ ಸುಧಾರಣೆ ಆಗುವುದಿಲ್ಲ ಎಂದೂ ಗೊತ್ತಿದೆ. ಹೀಗಾಗಿ, ವಿರೋಧ ಪಕ್ಷಗಳ ನಾಯಕರೂ ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅನುಮತಿ ನೀಡಲಾಗುತ್ತಿದೆ’ ಎಂದರು.

‘ಅಕ್ರಮವಾಗಿ ನೀರು ತಡೆಯಲು ಕಾರ್ಯಪಡೆ’

‘ನೀರು ಬಳಕೆದಾರರ ಸಹಕಾರ ಸಂಘಕ್ಕೆ ಶಕ್ತಿ ತುಂಬಿ ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತದಂತೆ ರೈತರಲ್ಲಿ ಅರಿವು ಮೂಡಿಸಬೇಕು. ಹಂತಹಂತವಾಗಿ ಕರ್ನಾಟಕ ನೀರಾವರಿ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಬೇಕು’ ಎಂದು ಎಂಜಿನಿಯರ್‌ಗಳಿಗೆ ಶಿವಕುಮಾರ್ ಸೂಚಿಸಿದರು.

‘ನೀರು ಬಳಕೆದಾರರ ಒಕ್ಕೂಟ ಸ್ಥಾಪಿಸಬೇಕು. ರೈತರಿಗೆ ನೀಡುವ ಉಚಿತ ವಿದ್ಯುತ್‌ಗೆ ₹13 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು ಇದು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ನೀರಾವರಿಗೆ ಸಂಪರ್ಕ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಈ ಬಗ್ಗೆ ನಿಗಾವಹಿಸಬೇಕು. ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತುವುದನ್ನು ತಡೆಯಲು ನೀರಾವರಿ ಮತ್ತು ಇಂಧನ ಇಲಾಖೆಯ ಅಧಿಕಾರಿಗಳ ಕಾರ್ಯಪಡೆ ರಚಿಸಲಾಗುವುದು’ ಎಂದರು.

ಕೊನೆ ಹಂತದವರೆಗೂ ನೀರು ತಲುಪಬೇಕು: ‘ಕೆಆರ್‌ಎಸ್‌ ನೀರು ಮಳವಳ್ಳಿಗೆ ಹರಿಯುತ್ತಿಲ್ಲ. ಬೆಳಗಾವಿ ತುಂಗಭದ್ರಾ ನೀರಾವರಿ ವಿಭಾಗದಲ್ಲೂ ಇದೇ ರೀತಿಯ ಸಮಸ್ಯೆ ಇದೆ. 10 ಎಚ್.ಪಿ ಸಾಮರ್ಥ್ಯದ ಮೋಟಾರ್‌ಗಳನ್ನು 100 ಮೀ. ಅಂತರದಲ್ಲಿ ಹಾಕಿ ತಮ್ಮದೇ ಹೊಂಡ ಮಾಡಿಕೊಂಡು ಅಲ್ಲಿಂದ 20 ಕಿ.ಮೀ ದೂರದವರೆಗೂ ನೀರು ತೆಗೆದುಕೊಂಡು ಹೋಗಲಾಗುತ್ತಿದೆ’ ಎಂದ ಅವರು ‘ಎತ್ತಿನಹೊಳೆ ಯೋಜನೆಗೆ ₹ 25 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇಷ್ಟು ಹಣ ಖರ್ಚು ಮಾಡಿ ಕೋಲಾರ ಚಿಕ್ಕಬಳ್ಳಾಪುರಕ್ಕೆ ನೀರು ಒದಗಿಸದಿದ್ದರೆ ಹೇಗೆ? ನೀರಾವರಿ ಕಾಲುವೆಯ ಕೊನೆಯವರೆಗೂ ಸಮರ್ಪಕವಾಗಿ ನೀರು ತಲುಪಬೇಕು. ಇಲ್ಲದಿದ್ದರೆ ಯೋಜನೆ ಸಾಕಾರಗೊಳ್ಳುವುದು ಹೇಗೆ’ ಎಂದೂ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.