ADVERTISEMENT

ಪೆನ್‌ಡ್ರೈವ್‌ ರೂವಾರಿ ಡಿಕೆ ಶಿವಕುಮಾರ್‌: ದೇವರಾಜೇಗೌಡ

​ಪ್ರಜಾವಾಣಿ ವಾರ್ತೆ
Published 6 ಮೇ 2024, 16:31 IST
Last Updated 6 ಮೇ 2024, 16:31 IST
<div class="paragraphs"><p>&nbsp;ದೇವರಾಜೇಗೌಡ</p></div>

 ದೇವರಾಜೇಗೌಡ

   

ಬೆಂಗಳೂರು: ‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಭಾಗಿಯಾಗಿದ್ದರೆನ್ನಲಾದ ಅಶ್ಲೀಲ ವಿಡಿಯೊಗಳನ್ನು ಹೊಂದಿದ್ದ ಪೆನ್‌ಡ್ರೈವ್‌ ಬಿಡುಗಡೆಯ ಹಿಂದಿನ ಕಥನಾಯಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌’ ಎಂದು ಹಾಸನದ ಬಿಜೆಪಿ ಮುಖಂಡ ಮತ್ತು ವಕೀಲ ದೇವರಾಜೇಗೌಡ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್‌ ಅವರು ರಹಸ್ಯ ಸ್ಥಳವೊಂದರಲ್ಲಿ ಸಭೆ ನಡೆಸಿ, ಸಾಮಾಜಿಕ ಜಾಲತಾಣದ ಮೂಲಕ ವಿಡಿಯೊ ಬಿಡುಗಡೆಗೆ ಸಂಬಂಧಿಸಿದಂತೆ ನನ್ನನ್ನು ಸಿಲುಕಿಸಿ, ಬಂಧಿಸಲು ಸಂಚು ಮಾಡಿದ್ದಾರೆ. ಈ ಸಂಬಂಧ ಸಿಬಿಐಗೆ ದೂರು ನೀಡುತ್ತೇನೆ’ ಎಂದು ಹೇಳಿದರು.

ADVERTISEMENT

ಅಶ್ಲೀಲ ವಿಡಿಯೊಗಳ ಬಿಡುಗಡೆ ನಂತರದ ಬೆಳವಣಿಗೆಗೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಶಿವಕುಮಾರ್‌ ತಮ್ಮ ಜತೆ ನಡೆಸಿದ ಸಂಭಾಷಣೆಯ ಆಡಿಯೊದ ಕೆಲವು ಭಾಗಗಳನ್ನು ಸುದ್ದಿಗಾರರಿಗೆ ಕೇಳಿಸಿದರು. ‘ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಅವರು ದೂರವಾಣಿ ಕರೆ ಮಾಡಿ ಶಿವಕುಮಾರ್‌ ಜತೆ ಮಾತನಾಡುವಂತೆ ಹೇಳಿದರು. ಆಡಿಯೊದಲ್ಲಿ ಪೂರ್ಣ ಮಾಹಿತಿ ಏನಿದೆ ಎಂಬುದನ್ನು ಈಗ ಪ್ಲೇ ಮಾಡುವುದಿಲ್ಲ. ಶಿವಕುಮಾರ್ ನನ್ನ ಜತೆ ಮಾತನಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಮಾತ್ರ ಪ್ಲೇ ಮಾಡಿದ್ದೇನೆ. ಎಸ್ಐಟಿ ಮೇಲೆ ನಂಬಿಕೆ ಇಲ್ಲದ ಕಾರಣ, ಈ ಆಡಿಯೊವನ್ನು ಸಿಬಿಐಗೆ ಒಪ್ಪಿಸುತ್ತೇನೆ’ ಎಂದು ದೇವರಾಜೇಗೌಡ ಹೇಳಿದರು.

‘ಶಿವಕುಮಾರ್ ಅವರು ಒಮ್ಮೆ ನನ್ನನ್ನು ಮನೆಗೆ ಕರೆಸಿದರು. ಈ ಪ್ರಕರಣದಲ್ಲಿ ಸಹಕರಿಸಿದರೆ ಲೋಕಸಭಾ ಚುನಾವಣೆ ಮುಗಿದ ಬಳಿಕ ಸಂಪುಟದಲ್ಲಿ ಸಚಿವರನ್ನಾಗಿ ಮಾಡುವುದಾಗಿಯೂ ಆಮಿಷ ಒಡ್ಡಿದ್ದರು’ ಎಂದು ಅವರು ಹೇಳಿದರು.

‘ನನ್ನ ಜೀವನದ ಉದ್ದಕ್ಕೂ ಎಚ್‌.ಡಿ.ರೇವಣ್ಣ ಮತ್ತು ಕುಟುಂಬದ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಸಂಸದ ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟ ಬಳಿಕ ಅದರಲ್ಲಿ ಅಶ್ಲೀಲ ವಿಡಿಯೊ ಇರುವುದನ್ನು ನೋಡಿದೆ. ಇದಕ್ಕೂ ಮೊದಲೇ ಪ್ರಜ್ವಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ತೆರವುಗೊಳಿಸುವಂತೆ ಕಾರ್ತಿಕ್‌ ಕೇಳಿಕೊಂಡಿದ್ದ. ನಾನು ಯಾವುದೇ ಕೆಲಸ ಮಾಡುವುದಿದ್ದರೂ ಕಾನೂನು ವ್ಯಾಪ್ತಿಯಲ್ಲೇ ಮಾಡುತ್ತೇನೆ. ಇನ್ನಷ್ಟು ಪುರಾವೆಗಳನ್ನು ತರುವಂತೆ ಆತನಿಗೆ ಸ್ಪಷ್ಟವಾಗಿ ಹೇಳಿದ್ದೆ’ ಎಂದು ಹೇಳಿದ ಅವರು ಕಾರ್ತಿಕ್‌ ಜತೆಗಿನ ಸಂಭಾಷಣೆಯ ವಿಡಿಯೊವೊಂದನ್ನು ಪ್ರದರ್ಶಿಸಿದರು.

‘ಇವೆಲ್ಲ ಆದ ಬಳಿಕ ಪೆನ್‌ಡ್ರೈವ್‌ ಯಾವ ರೀತಿ ಬೆಂಗಳೂರಿಗೆ ಬಂತು ಎಂಬ ಸಂಪೂರ್ಣ ಮಾಹಿತಿಯನ್ನೂ ಎಸ್ಐಟಿ ಅಧಿಕಾರಿಗಳಿಗೆ ಹೇಳಿಕೆ ಮೂಲಕ ವಿವರ ನೀಡಿದ್ದೇನೆ’ ಎಂದರು.

ಮೋದಿ– ಕುಮಾರಸ್ವಾಮಿ ಗುರಿ:

‘ಈ ಪೆನ್‌ಡ್ರೈವ್‌ ಬಿಡುಗಡೆ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ಗುರಿ ಮಾಡುವ ಉದ್ದೇಶವಿತ್ತು. ಎಚ್‌.ಡಿ.ರೇವಣ್ಣ ಅವರನ್ನು ರಾಜಕೀಯವಾಗಿ ಮುಗಿಸಿದರು. ಮೋದಿ ಮತ್ತು ಕುಮಾರಸ್ವಾಮಿ ಅವರನ್ನು ಮುಗಿಸಲು ತಂತ್ರ ಮಾಡಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಲಾಭ ಪಡೆಯುವುದು ಅವರ ಉದ್ದೇಶವಾಗಿದೆ’ ಎಂದು ದೇವರಾಜೇಗೌಡ ಆರೋಪಿಸಿದರು.

ಸಂತ್ರಸ್ತೆಗೆ ಹಣ ಕೊಟ್ಟಿದ್ದು ಯಾರು?

‘ಬೇಲೂರಿನ ಅರೇಹಳ್ಳಿಗೆ ಹೋಗಿ ಕಾಂಗ್ರೆಸ್‌ ಪಕ್ಷದವರು ಸಂತ್ರಸ್ತೆಗೆ ಹಣ ಹಂಚಿಕೆ ಮಾಡಿದ್ದಾರೆ. ಅಲ್ಲಿಗೆ ಹೋಗಿದ್ದು ಯಾರು, ಎಷ್ಟು ಗಾಡಿಗಳು ಹೋಗಿದ್ದವು, ಯಾರನ್ನು ಕರೆದುಕೊಂಡು ಬಂದ್ರು. ಹಾಸನದ ಸ್ಕೈಬರ್ಡ್‌ ಹೋಟೆಲ್‌ನಲ್ಲಿ ಸಂತ್ರಸ್ತೆಯ ಜೊತೆ ಶ್ರೇಯಸ್‌ ಪಟೇಲ್‌ ಎಷ್ಟು ಹೊತ್ತು ಮಾತನಾಡಿದ್ದಾರೆ ಎಂಬುದೆಲ್ಲ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದೆ. ಬೇಕಿದ್ದರೆ ತೆಗೆಸಿ ನೋಡಬಹುದು’ ಎಂದು ಅವರು ಹೇಳಿದರು.

ಡಿಕೆಶಿ ಹೇಳಿದ್ದೇನು; ದೇವರಾಜ್‌ ವಿವರಣೆ

ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ದೂರವಾಣಿ ಕರೆ ಮಾಡಿ, ‘ಎಲ್ಲಪ್ಪಾ ನಿನ್ನ ಮನೆ. ಸದಾಶಿವನಗರದ ಡಿಕೆ ಸಾಹೇಬ್ರ ಮನೆಗೆ ಬಂದು ಹೋಗಲು ಆಗುತ್ತಾ’ ಎಂದು ದೇವರಾಜೇಗೌಡ ಅವರನ್ನು ಪ್ರಶ್ನಿಸಿದರು.

‘ದೇವನಹಳ್ಳಿ ಸಮೀಪ ಮನೆ ಇದೆ’ ಎಂದು ದೇವರಾಜೇಗೌಡ ಉತ್ತರಿಸಿದರು.

‘ಡಿಕೆ ಸಾಹೇಬ್ರಿಗೆ ಫೋನ್‌ ಕೊಡ್ತೇನೆ ಮಾತಾಡು’ ಎನ್ನುತ್ತಾರೆ ಶಿವರಾಮೇಗೌಡ. ‘ನಮಸ್ಕಾರ ದೇವರಾಜ್...’ ಎಂದು ಡಿ.ಕೆ.ಶಿವಕುಮಾರ್ ಅವರದ್ದು ಎನ್ನಲಾದ ಧ್ವನಿ ಕೇಳಿ ಬರುತ್ತದೆ.

ಇಷ್ಟು ಸಂಭಾಷಣೆ ಕೇಳಿಸಿದ ದೇವರಾಜೇಗೌಡ, ‘ಮುಂದಿನ ಸಂಭಾಷಣೆ ಅತ್ಯಂತ ಮಹತ್ವದಾದ್ದರಿಂದ ಅದನ್ನು ಸಿಬಿಐಗೆ ಕೊಡಬೇಕು. ಆದ್ದರಿಂದ ಉಳಿದ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿ, ಮಾತನಾಡುವ ಸಂದರ್ಭದಲ್ಲಿ, ‘ದೂರು ಕೊಡುವವರು ಗಟ್ಟಿಯಾಗಿ ನಿಂತರೆ ಆರೋಪಿ ತಪ್ಪಿಸಿಕೊಳ್ಳಲು ಆಗುವುದಿಲ್ಲ’ ಎಂದು  ಹೇಳಿದೆ. ಅದಕ್ಕೆ ಶಿವಕುಮಾರ್ ಅವರು, ‘ನಾವು ಇದ್ದೇವಲ್ಲ, ಅದೆಲ್ಲ ಮಾಡ್ತೀವಿ ಬಿಡು’ ಎಂದು ಪ್ರತಿಕ್ರಿಯಿಸಿದರು.

ದೇವರಾಜೇಗೌಡ ಆರೋಪ ಸುಳ್ಳು: ಡಿಕೆಶಿ

‘ನನಗೂ ಪೆನ್‌ಡ್ರೈವ್‌ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ನನ್ನ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ದೇವರಾಜೇಗೌಡ ಬಿಜೆಪಿಯಿಂದ ಚುನಾವಣೆಗೆ ನಿಂತಿದ್ದರು. ಪ್ರಜ್ವಲ್ ಪ್ರಕರಣದಲ್ಲಿ ಜೆಡಿಎಸ್ ಹಾಗೂ ಮಿತ್ರ ಪಕ್ಷ ಬಿಜೆಪಿಗೂ ಬಹಳ ಮುಜುಗರ ಮತ್ತು ಮುಖಭಂಗ ಆಗಿದೆ. ಆಗಿರುವ ಹಾನಿ ನಿವಾರಿಸಿ
ಕೊಳ್ಳಲು ಬಿಜೆಪಿ-ಜೆಡಿಎಸ್ ನಾಯಕರು ದೇವರಾಜೇಗೌಡನ ಮೂಲಕ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿಸಿದ್ದಾರೆ’ ಎಂದು ಅವರು ದೂರಿದ್ದಾರೆ.

‘ತಮ್ಮಲ್ಲಿ ಪೆನ್‌ಡ್ರೈವ್‌ ಇರುವ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದ ದೇವರಾಜೇಗೌಡ, ಬಿಜೆಪಿ ನಾಯಕರ ಅನುಮತಿ ಪಡೆದು ಅದನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದ್ದರು. ಹೀಗಿರುವಾಗ ನನಗೂ ಪೆನ್‌ಡ್ರೈವ್‌ ಬಿಡುಗಡೆಗೂ ಏನು ಸಂಬಂಧ? ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು ಎಂಬಂತೆ ದೇವರಾಜೇಗೌಡ ಮಾಡುವುದೆಲ್ಲ ಮಾಡಿ ಈಗ ನನ್ನ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿ-ಜೆಡಿಎಸ್ ನಾಯಕರ ಷಡ್ಯಂತ್ರ ಇದೆ’ ಎಂದು ಶಿವಕುಮಾರ್ ಆಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.