ADVERTISEMENT

ಸಿಬಿಐ ಕೇಂದ್ರದ ಏಜೆಂಟ್‌: ಡಿ.ಕೆ.ಶಿವಕುಮಾರ್ ಪರ ವಕೀಲರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 27 ಮೇ 2024, 16:17 IST
Last Updated 27 ಮೇ 2024, 16:17 IST
<div class="paragraphs"><p>ಸಿಬಿಐ ಕಚೇರಿ</p></div>

ಸಿಬಿಐ ಕಚೇರಿ

   

ಬೆಂಗಳೂರು:‌ ‘ಸಿಬಿಐ ಕೇಂದ್ರ ಸರ್ಕಾರದ ಏಜೆಂಟ್‌ನಂತೆ ಕಾರ್ಯ ನಿರ್ವಹಿಸುತ್ತಿದೆ. ಸಿಬಿಐ ಯಾವ ರಸ್ತೆಯಲ್ಲಿ, ಯಾರ ಮನೆಗೆ ಹೋಗಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಹಿರಿಯ ವಕೀಲರು ಹೈಕೋರ್ಟ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್‌ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಈ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ಈಗಿನ ಕಾಂಗ್ರೆಸ್‌ ಸರ್ಕಾರ ಹಿಂಪಡೆದಿತ್ತು. ಅನುಮತಿ ಹಿಂಪಡೆದ ಕ್ರಮವನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿರುವ ಪ್ರತ್ಯೇಕ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ರಾಜ್ಯ ಪ್ರವೇಶಿಸಲು ಸಿಬಿಐಗೆ ಕೇಂದ್ರ ಸರ್ಕಾರದ ಆಂತರಿಕ ಅನುಮತಿ ಅಗತ್ಯ. ಸಿಬಿಐ ಕಾನೂನುಬಾಹಿರವಾಗಿ ರಾಜ್ಯ ಪ್ರವೇಶಿಸಲು ಅನುಮತಿಸುವುದು ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆ. ಒಕ್ಕೂಟ ವ್ಯವಸ್ಥೆಯು ಸಂವಿಧಾನ ಮೂಲರಚನೆಯ ಸಿದ್ಧಾಂತ. ಅಷ್ಟಕ್ಕೂ ಈ ಪ್ರಕರಣದಲ್ಲಿ ಸಿಬಿಐ ಬಾಧಿತವಲ್ಲ. ಅಂತೆಯೇ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಕೂಡಾ ಹೊಂದಿಲ್ಲ’ ಎಂದು ಪ್ರತಿಪಾದಿಸಿದರು.

ಮಾನದಂಡ ಪಾಲನೆ ಆಗಿಲ್ಲ: ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್ ಅವರು, ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಅಂದಿನ ಬಿಜೆಪಿ ಸರ್ಕಾರವು 2019ರ ಸೆಪ್ಟೆಂಬರ್ 25ರಂದು ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಅನುಮತಿ ನೀಡಿರುವುದು ಅಕ್ರಮ. ಸಿಬಿಐಗೆ ಪ್ರಕರಣ ಒಪ್ಪಿಸುವಾಗ ಒಕ್ಕೂಟ ವ್ಯವಸ್ಥೆಯ ಮಾನದಂಡಗಳ ಪಾಲನೆ ಆಗಿಲ್ಲ’ ಎಂದರು.

‘ಭ್ರಷ್ಟಾಚಾರ ನಿಷೇಧ ಕಾಯ್ದೆಯ ಕಲಂ 17ಎ ಅಡಿ ಪ್ರಕ್ರಿಯೆ ಆರಂಭಿಸಲು ಅನುಮತಿ ಅಗತ್ಯವಿದೆಯೇ ಎಂಬ ಬಗ್ಗೆ ಅಂದಿನ ಅಡ್ವೊಕೇಟ್ ಜನರಲ್ (ಪ್ರಭುಲಿಂಗ ಕೆ.ನಾವದಗಿ) ಅವರಿಂದ ಅಭಿಪ್ರಾಯ ಕೇಳಲಾಗಿತ್ತು. ಅವರು ಅಭಿಪ್ರಾಯ ನೀಡುವುದಕ್ಕೂ ಮುಂಚೆಯೇ ಪ್ರಕರಣವನ್ನು ಬಿಜೆಪಿ ನೇತೃತ್ವದ ಸರ್ಕಾರ ಸಿಬಿಐಗೆ ವಹಿಸಲಾಗಿತ್ತು. ಬಳಿಕ ಎಜಿ ಅಭಿಪ್ರಾಯದಲ್ಲಿ ಅಪರಾಧದ ಸ್ವಭಾವವನ್ನು ತಿಳಿಯಬೇಕು ಎಂದು ಹೇಳಲಾಗಿತ್ತು. ಆದರೆ, ಆ ವೇಳೆಗಾಗಲೇ ಪ್ರಕರಣ ಸಿಬಿಐ ತೆಕ್ಕೆಗೆ ಜಾರಿತ್ತು’ ಎಂದರು.

‘ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು ಕಾನೂನುಬಾಹಿರ. ಹೀಗಾಗಿ, ಅದನ್ನು ಹಿಂಪಡೆಯುವ ಅಗತ್ಯವೇ ಇಲ್ಲ. ಕಾನೂನುಬಾಹಿರವಾದ ಆದೇಶವನ್ನು ಹಿಂಪಡೆಯಲಾಗದು. ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ಬಳಿಕ ಈಗಿನ ರಾಜ್ಯ ಸರ್ಕಾರ ಪ್ರಕರಣವನ್ನು ಲೋಕಾಯುಕ್ತರಿಗೆ ವಹಿಸಿದೆ. ನಾವಿಲ್ಲಿ ಯಾರನ್ನೂ ರಕ್ಷಿಸುತ್ತಿಲ್ಲ’ ಎಂದರು.

ಪ್ರತಿವಾದಿಗಳ ಪರ ವಾದಕ್ಕೆ ಪ್ರತಿಕ್ರಿಯಿಸಲು ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಸಮಯಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿತು. ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಮತ್ತು ಬಸನಗೌಡ ಪಾಟೀಲ್ ಪರ ವಕೀಲ ವೆಂಕಟೇಶ್‌ ಪಿ.ದಳವಾಯಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.