ADVERTISEMENT

ಡಿ.ಕೆ ಮೇಕೆದಾಟು ಪಾದಯಾತ್ರೆ ಕೋವಿಡ್‌ 3 ನೇ ಅಲೆಯ ‘ಸೂಪರ್‌ ಸ್ಪ್ರೆಡರ್‌’: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 10:25 IST
Last Updated 11 ಜನವರಿ 2022, 10:25 IST
ಮೇಕೆದಾಟು ಪಾದಯಾತ್ರೆಯಲ್ಲಿ ಡಿಕೆಶಿ
ಮೇಕೆದಾಟು ಪಾದಯಾತ್ರೆಯಲ್ಲಿ ಡಿಕೆಶಿ   

ಬೆಂಗಳೂರು: 'ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದ ಪಾದಯಾತ್ರೆಯು ಕೋವಿಡ್‌ ಮೂರನೇ ಅಲೆಯ ‘ಸೂಪರ್‌ ಸ್ಪ್ರೆಡರ್’ ಆಗುವ ಅಪಾಯವಿದೆ'ಎಂದು ಬಿಜೆಪಿ ದೂರಿದೆ.

‘ಕಾಂಗ್ರೆಸ್‌ ಪಕ್ಷದ ಪುನಶ್ಚೇತನ ಮತ್ತು ಶಿವಕುಮಾರ್‌ ತಮ್ಮ ನಾಯಕತ್ವ ದೃಢಪಡಿಸಿಕೊಳ್ಳಲು ಓಮೈಕ್ರಾನ್‌ ಸಂದರ್ಭದಲ್ಲೇ ಪಾದಯಾತ್ರೆ ನಡೆಸಬೇಕಿತ್ತೆ’ ಎಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ವಿವೇಕ್‌ ರೆಡ್ಡಿ ಮತ್ತು ಬಿಜೆಪಿ ರಾಜ್ಯ ಮುಖ್ಯವಕ್ತಾರ ಎಂ.ಜಿ.ಮಹೇಶ್‌ ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

‘ಸುಪ್ರೀಂಕೋರ್ಟ್‌ ಒಪ್ಪಿಗೆ ಸಿಕ್ಕಿದ ತಕ್ಷಣ ಮೇಕೆದಾಟು ಯೋಜನೆ ಆರಂಭಿಸಲು ಒಂದು ಕ್ಷಣ ಕೂಡಾ ವಿಳಂಬ ಮಾಡುವುದಿಲ್ಲ. ನಿಜಲಿಂಗಪ್ಪ ಅವರ ಕಾಲದಲ್ಲಿ ಆರಂಭಿಸಿದ ಯೋಜನೆ ಇಲ್ಲಿಯವರೆಗೆ ಏಕೆ ಬಂತು ಎಂಬುದಕ್ಕೆ ಶಿವಕುಮಾರ್ ಉತ್ತರ ನೀಡಬೇಕು. ಕಾಂಗ್ರೆಸ್‌ ನಿರ್ಲಕ್ಷ್ಯದಿಂದಾಗಿ ಮೇಕೆದಾಟು ಯೋಜನೆ ₹5ಸಾವಿರ ಕೋಟಿಯಿಂದ ₹10 ಸಾವಿರ ಕೋಟಿಗೆ ಏರಿಕೆ ಆಗಿದೆ. ಕಾಂಗ್ರೆಸ್‌ ನಾಟಕವನ್ನು ಜನ ನೋಡಿದ್ದಾರೆ. ಈ ಯೋಜನೆಯನ್ನು ಬಿಜೆಪಿಯೇ ಪೂರ್ಣಗೊಳಿಸಲಿದೆ’ ಎಂದು ಮಹೇಶ್‌ ಹೇಳಿದರು.

ADVERTISEMENT

ನಾಲ್ಕು ದಶಕ ರಾಜಕಾರಣ ಮಾಡಿದ ಶಿವಕುಮರ್‌ ಅವರ ಪ್ರಮುಖ ಸಾಧನೆಗಳೇನು? ಬಂಡೆ ನುಂಗೋದು, ಗುಡ್ಡೆ ನುಂಗೋದು ಮತ್ತು ಗೋಮಾಳ ನುಂಗೋದು ಎಂದು ಅವರು ಆರೋಪಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷದ್ದು ಕೇವಲ ಶಂಕುಸ್ಥಾಪನೆ ಸರ್ಕಾರವಾಗಿತ್ತು. 1500 ಕ್ಕೂ ಹೆಚ್ಚು ಯೋಜನೆಗಳು ಹಾಗೇ ಉಳಿದಿದ್ದವು. ಅಂಥ ಯೋಜನೆಗಳನ್ನು ಪೂರ್ಣಗೊಳಿಸಲು ₹14 ಲಕ್ಷ ಕೋಟಿ ಹೂಡುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡು ಯೋಜನೆಗಳನ್ನು ಜಾರಿಗೊಳಿಸಿದರು ಎಂದು ಮಹೇಶ್‌ ಹೇಳಿದರು

ಶಿವಕುಮಾರ್‌ ಇಂಧನ ಸಚಿವರಾಗಿದ್ದಾಗ ಈ ಯೋಜನೆ ಸಂಬಂಧ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರೆ? ಈ ಯೋಜನೆಯನ್ನು ಮುನ್ನೆಲೆಗೆ ತಂದಿದ್ದೇ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ಎಂದು ವಿವೇಕ್‌ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.