ADVERTISEMENT

ಬಿಜೆಪಿ ಮಾತು ಕೇಳಿ ರಾಜ್ಯಪಾಲರಿಂದ ಮಸೂದೆ ವಾಪಸ್‌: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 16:20 IST
Last Updated 23 ಆಗಸ್ಟ್ 2024, 16:20 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ಬೆಂಗಳೂರು: ಬಿಜೆಪಿ ಶಾಸಕರ ಮಾತು ಕೇಳಿ ರಾಜ್ಯಪಾಲರು 15 ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ. ಬಿಜೆಪಿ ಮಾತು ಕೇಳುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸರ್ಕಾರಗಳು ಏಕೆ ಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಮಸೂದೆಯ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದ್ದರೆ ಕೇಳಲಿ, ಕಳುಹಿಸಿಕೊಡುತ್ತೇವೆ. ಅದನ್ನು ತಪ್ಪು ಎನ್ನಲು ಆಗುತ್ತದೆಯೇ? ಆದರೆ, ಸಂವಿಧಾನಬದ್ಧವಾಗಿ ಜನರಿಂದ ಆಯ್ಕೆಯಾದ ಶಾಸನಸಭೆಗಳು ಅಂಗೀಕರಿಸಿದ ಮಸೂದೆಗಳನ್ನು ಕಾರಣ ನೀಡದೆ ವಾಪಸ್‌ ಕಳುಹಿಸುವುದು ಸರಿಯಲ್ಲ’ ಎಂದರು.

ADVERTISEMENT

‘ರಾಜ್ಯ‍ಪಾಲರನ್ನು ಬಳಸಿಕೊಂಡು ಸರ್ಕಾರ ಬೀಳಿಸುವ ಪ್ರಯತ್ನ ನಡೆದರೆ ಸುಮ್ಮನೆ ಕೂರುವುದಿಲ್ಲ. ನಾವು ನಮ್ಮ ಕೆಲಸ ಮಾಡುತ್ತೇವೆ. ದೇವರು ಅವರಿಗೆ ಒಳ್ಳೆಯ ಬುದ್ದಿ ಕೊಡಲಿ’ ಎಂದು ಹೇಳಿದರು.

ಪರಿಷತ್‌ ಸದಸ್ಯರ ಖಂಡನೆ:

ಜನರ ವಿಶ್ವಾಸ ಗಳಿಸಿದ ಜನಪ್ರಿಯ ಸರ್ಕಾರದ ಕಾರ್ಯಚಟುವಟಿಕೆಗೆ ರಾಜ್ಯಪಾಲರು ಅಡ್ಡಿ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯರು ದೂರಿದ್ದಾರೆ.

ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾದ 11 ಮಸೂದೆಗಳನ್ನು ರಾಜ್ಯಪಾಲರು ವಾಪಸ್‌ ಕಳುಹಿಸುವ ಮೂಲಕ ವಿರೋಧ ಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ ಎಂದು ಮಂಜುನಾಥ ಭಂಡಾರಿ, ಎಸ್. ರವಿ, ಅನಿಲ್‌ ಕುಮಾರ್‌, ರಾಜೇಂದ್ರ ರಾಜಣ್ಣ, ದಿನೇಶ್ ಗೂಳಿಗೌಡ, ಸುನಿಲ್‌ ಗೌಡ ಪಾಟೀಲ, ಚಂದ್ರಶೇಖರ ಪಾಟೀಲ, ಚೆನ್ನರಾಜು, ಮಧು ಮಾದೇಗೌಡ, ಡಾ.ತಿಮ್ಮಯ್ಯ, ರಾಮೋಜಿ ಗೌಡ, ಡಿ.ಟಿ. ಶ್ರೀನಿವಾಸ, ಶರಣಗೌಡ ಪಾಟೀಲ, ಭೀಮರಾವ್‌ ಪಾಟೀಲ, ತಿಪ್ಪಣ್ಣಪ್ಪ ಕಮಕನೂರ ಅವರು ಖಂಡಿಸಿದ್ದಾರೆ.

‘ಮಸೂದೆಯಲ್ಲಿ ಲೋಪಗಳಿದ್ದರೆ, ಸ್ಪಷ್ಟನೆ ಕೇಳುವ ಅಧಿಕಾರ ರಾಜ್ಯಪಾಲರಿಗಿದೆ. ಆದರೆ, ವಿರೋಧಪಕ್ಷದವರು ವಿರೋಧಿಸಿದ್ದಾರೆ ಎಂಬ ಕಾರಣಕ್ಕೆ ಮಸೂದೆಗಳನ್ನು ವಾಪಸ್‌ ಕಳಿಸುವುದು ಸರಿಯಾದ ಕ್ರಮವಲ್ಲ. ಸಂವಿಧಾನ ನೀಡಿದ ಅಧಿಕಾರ ಕಿತ್ತುಕೊಳ್ಳುವ ಧೋರಣೆ ಸರಿಯಲ್ಲ. ಈ ರೀತಿ ವರ್ತನೆಯಿಂದ ಶಾಸಕ ಸಭೆಗಳ ಮಹತ್ವ ಕಡಿಮೆಯಾಗುತ್ತದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ರಾಜಕೀಯದ ದುರುದ್ದೇಶದ ನಡೆಯ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.