ADVERTISEMENT

ನೀಚ, ಹೇಡಿತನದ ರಾಜಕಾರಣ : ಡಿ.ಕೆ.ಶಿವಕುಮಾರ್‌ ಆಕ್ರೋಶ

ಆರ್‌.ಆರ್‌. ನಗರದ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 19:57 IST
Last Updated 15 ಅಕ್ಟೋಬರ್ 2020, 19:57 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಆರ್‌.ಆರ್‌. ನಗರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ಐಆರ್ ದಾಖಲಿಸುವ ಮೂಲಕ ಸರ್ಕಾರ, ನೀಚ ಹಾಗೂ ಹೇಡಿತನದ ರಾಜಕಾರಣ ಮಾಡುತ್ತಿದೆ. ಈ ಬೆದರಿಕೆ ತಂತ್ರಕ್ಕೆ ನಾವು ಹೆದರುವುದಿಲ್ಲ. ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹೆಣ್ಣುಮಗಳ ಮೇಲೆ ಪ್ರಕರಣ ದಾಖಲಿಸಿದ ಇಷ್ಟು ಹೊಲಸು ರಾಜಕೀಯವನ್ನು ನನ್ನ ರಾಜಕೀಯ ಬದುಕಿನಲ್ಲಿ ನೋಡಿಲ್ಲ. ಮುಗ್ಧ, ಅಮಾಯಕ,ನೊಂದ-ಬೆಂದ ಹೆಣ್ಣುಮಗಳ ಮೇಲೆ ದಬ್ಬಾಳಿಕೆ ತೋರಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ’ ಎಂದು ಕಿಡಿಕಾರಿದರು.

‘ನಾಮಪತ್ರ ಸಲ್ಲಿಸಲು ಬಂದಿದ್ದ ಕುಸುಮಾ, 100 ಮೀಟರ್ ದೂರದಲ್ಲಿ ಹಾಕಿದ್ದ ಬ್ಯಾರಿಕೇಡ್ ತಳ್ಳಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಕುಸುಮಾ ಜತೆ ನಾನು ಮತ್ತು ಸಿದ್ದರಾಮಯ್ಯ ಇದ್ದೆವು. ನಮ್ಮ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ ನಾಯಕರು, ಕಾರ್ಯಕರ್ತರುಗಳು ಮೆರವಣಿಗೆ ಮಾಡಿಕೊಂಡು ಬ್ಯಾರಿಕೇಡ್ ದಾಟಿ ಬಂದಿಲ್ಲವೇ. ಸಚಿವರು, ಉಪಮುಖ್ಯಮಂತ್ರಿಗಳು ತಮ್ಮ ಬೆಂಬಲಿಗರೊಂದಿಗೆ ನಿಯಮ ಮೀರಿ ಬಂದಿಲ್ಲವೇ. ಅವರೆ
ಲ್ಲರ ವಿರುದ್ಧ ಪ್ರಕರಣ ದಾಖಲಿಸದೆ ಕುಸುಮಾ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗಿದೆ’ ಎಂದು ದೂರಿದರು.

ADVERTISEMENT

‘ಮುನಿರತ್ನ ನಮ್ಮ ಶಾಸಕರಾಗಿದ್ದಾಗಲೇ ಬಿಜೆಪಿ ಕಾರ್ಯಕರ್ತರ ಮೇಲೆ 1,100, ಕಾಂಗ್ರೆಸ್ ಕಾರ್ಯಕರ್ತರ ಮೇಲೆ 400, ಜೆಡಿಎಸ್ ಕಾರ್ಯಕರ್ತರ ಮೇಲೂ 200 ಕೇಸು ಹಾಕಿದ್ದಾರೆ. ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಇಷ್ಟು ಕೇಸು ಹಾಕಿಸಿದ್ದಾರೆ. ಅಲ್ಲಿ ಯಾರು ಬಂದಿದ್ದರೋ ಅವರ ವಿವರದ ಸಾಕ್ಷಿ ನಮ್ಮ ಬಳಿ ಇದೆ. ಹೆಣ್ಣುಮಗಳನ್ನು ಧೃತಿಗೆಡಿಸುವ ಈ ಯತ್ನ ಸಣ್ಣತನದ ರಾಜಕಾರಣಕ್ಕೆ ಸಾಕ್ಷಿ’ ಎಂದರು.

‘ನಾವು ಜಾಮೀನು ಪಡೆಯುತ್ತೇವೆ. ಹೆದರುತ್ತೇವೆ ಎಂದುಕೊಂಡರೆ ಅದು ಭ್ರಮೆ. ನಮ್ಮ ಕಾರ್ಯಕರ್ತರನ್ನು ಹೆದರಿಸಿ, ತಡೆಯಲು ಇಂಥದ್ದೊಂದು ಪ್ರಕರಣ ದಾಖಲಿಸಲಾಗಿದೆ. ನಮ್ಮ ಅಭ್ಯರ್ಥಿ ಮೇಲೆ ಸುಳ್ಳು ಕೇಸು ಹಾಕಿದ ಸರ್ಕಲ್ ಇನ್‌ಸ್ಪೆಕ್ಟರ್ ವರ್ಗಾವಣೆ ಆಗಬೇಕು. ನಾವು ಬೆಳೆಸಿದ ವ್ಯಕ್ತಿ ಈಗ ಬಿಜೆಪಿ ಅಭ್ಯರ್ಥಿ. ಆತನನ್ನು ಬೆಳೆಸಿದ್ದಕ್ಕೆ ನಾವು, ಬಿಜೆಪಿ, ಜೆಡಿಎಸ್‌ನವರು ಪಶ್ಚಾತಾಪ ಪಡುತ್ತಿದ್ದೇವೆ. ಅವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ’ ಎಂದೂ ಹೇಳಿದರು.

***

‘ಯಾವುದೇ ಅಭ್ಯರ್ಥಿ ವಿರುದ್ಧ ಕೇಸು ದಾಖಲಿಸಿ ರಾಜಕಾರಣ ಮಾಡುವ ಅನಿವಾರ್ಯ ನಮಗಿಲ್ಲ. ದುರುದ್ದೇಶದಿಂದ ಕೇಸು ದಾಖಲಿಸಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ

- ಡಾ.ಸುಧಾಕರ್, ಆರೋಗ್ಯ ಸಚಿವ

***

ನಿಯಮ ಉಲ್ಲಂಘಿಸಿದ್ದರಿಂದ ಕ್ರಮ: ಗೃಹ ಸಚಿವ

ಕಾಂಗ್ರೆಸ್‌ ಅಭ್ಯರ್ಥಿ ನಿಯಮ ಉಲ್ಲಂಘಿಸಿದ್ದರಿಂದ ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಕುಸುಮಾ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ‘ಚುನಾವಣಾ ಆಯೋಗ ಸುಮ್ಮನೆ ಯಾರ ಮೇಲೂ ದೂರು ದಾಖಲಿಸುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ಅದು ಸ್ವಾಯತ್ತ ಸಂಸ್ಥೆ ಆಗಿರುವುದರಿಂದ ಅಲ್ಲಿ ಯಾವುದೇ ರಾಜಕೀಯ ಪಕ್ಷದ ಮಾತುಗಳು ನಡೆಯುವುದಿಲ್ಲ’ ಎಂದು ಹೇಳಿದರು.

‘ಕುಸುಮಾ ಇರಲಿ ಯಾರೇ ಇರಲಿ, ದೇಶದ ಪ್ರಜೆ ಎಂದ ಮೇಲೆ ಎಲ್ಲರಿಗೂ ಕಾನೂನು ಒಂದೇ. ಈ ಸರಳ ವಿಚಾರ ಶಿವಕುಮಾರ್ ಅವರಿಗೆ ಗೊತ್ತಿಲ್ಲವೇ? ಶಿರಾ ಮತ್ತುಆರ್‌.ಆರ್‌.ನಗರದಲ್ಲಿ ಸೋಲಿನ ಸುಳಿವು ಸಿಕ್ಕಿರುವುದರಿಂದಲೇ ಕಾಂಗ್ರೆಸ್‌ ನಾಯಕರು ಹತಾಶರಾಗಿದ್ದಾರೆ. ಹೀಗಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಬೊಮ್ಮಾಯಿ ತಿಳಿಸಿದರು.

‘ಸರ್ವಾಧಿಕಾರ, ದುರಹಂಕಾರ, ಹತಾಶೆಯ ನಡವಳಿಕೆ’

‘ಆರ್‌.ಆರ್‌. ನಗರ ಕ್ಷೇತ್ರದ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೆ ಹೋಗುತ್ತಿದ್ದಾಗ ನಮ್ಮನ್ನು ಬಲವಂತವಾಗಿ ತಡೆಯುವ ಪ್ರಯತ್ನ ಮಾಡಿದ್ದ ಪೊಲೀಸರು, ಅಭ್ಯರ್ಥಿ ಕುಸುಮಾ ಮತ್ತು ನನ್ನ ಬೆಂಗಾವಲು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದು ರಾಜ್ಯ ಬಿಜೆಪಿ ಸರ್ಕಾರದ ಸರ್ವಾಧಿಕಾರ, ದುರಹಂಕಾರ, ಹತಾಶೆಯ ನಡವಳಿಕೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಚುನಾವಣೆಗಳು ಚುನಾವಣಾ ಆಯೋಗದ ಕಣ್ಗಾವಲಿನಲ್ಲಿ ನಡೆಯಬೇಕು ಮತ್ತು ಪೊಲೀಸರು ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಬೇಕು. ಈ ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ಪಕ್ಕಕ್ಕೆ ಸರಿಸಿ ಪೊಲೀಸರೇ ಅತ್ಯುತ್ಸಾಹದಿಂದ ದೂರು ದಾಖಲಿಸಿರುವುದರಲ್ಲಿ ರಾಜ್ಯ ಸರ್ಕಾರದ ಕೈವಾಡ ಎದ್ದು ಕಾಣುತ್ತಿದೆ’ ಎಂದೂ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.