ಕಾರವಾರ: ಅಂಕೋಲಾ ತಾಲ್ಲೂಕಿನ ಅಂದ್ಲೆ ಗ್ರಾಮದ ಜಗದೀಶ್ವರಿ ದೇವಸ್ಥಾನದಲ್ಲಿ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಶುಕ್ರವಾರ ವಿಶೇಷಪೂಜೆ ನೆರವೇರಿಸುತ್ತಿದ್ದಾರೆ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಅಂಕೋಲಾಕ್ಕೆ ಬಂದ ಅವರು ನೇರವಾಗಿ ದೇವಸ್ಥಾನಕ್ಕೆ ತೆರಳಿದರು.
ಇದಕ್ಕೂ ಮೊದಲು ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಈ ಉಪ ಚುನಾವಣೆಯು ಮತದಾರರಿಗೆ ಪ್ರತಿಷ್ಠೆಯಾಗಿದೆ. ಇದರಲ್ಲಿ ಗೆಲುವು ನನ್ನ ಅಥವಾ ಕಾಂಗ್ರೆಸ್ ನ ಪ್ರತಿಷ್ಠೆಯ ಪ್ರಶ್ನೆಯೆಂಬುದಿಲ್ಲ. ಮತದಾರರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅದಕ್ಕೆ ಅವರು ಸೂಕ್ತ ಉತ್ತರ ಕೊಡುತ್ತಾರೆ' ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ, ಹೆಲಿಪ್ಯಾಡ್ ಬಳಿ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಿ ಉಭಯ ಕುಶಲೋಪರಿ ವಿಚಾರಿಸಿದರು.
ಉಳಿದಂತೆ, ಕಾಂಗ್ರೆಸ್ ಮುಖಂಡ ಕೃಷ್ಣ ಗೌಡ, ಜಿ.ಎಂ.ಶೆಟ್ಟಿ, ಸಂತೋಷ ಶೆಟ್ಟಿ, ಪ್ರದೀಪ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ ಗೌಡ ಸೇರಿದಂತೆ ಹಲವು ಮುಖಂಡರು ಇದ್ದರು.
ಜಗದೀಶ್ವರಿ ದೇವಸ್ಥಾನವು ಅಂಕೋಲಾ ಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿದೆ. ತಮ್ಮ ಮನಸ್ಸಿನಲ್ಲಿರುವ ಕಾರ್ಯಗಳ ಬಗ್ಗೆ ದೇವಿಯಿಂದ ಪ್ರಸಾದ ಕೇಳುವ ಪದ್ಧತಿ ಇಲ್ಲಿ ರೂಢಿಯಲ್ಲಿದೆ.
ಈ ದೇಗುಲದಲ್ಲಿ ನಡೆಯುವ ಪೂಜೆಗೆ ವಿಶಿಷ್ಟ ಸಂಪ್ರದಾಯವಿದ್ದು, ಅಭಿಷೇಕದ ನಂತರ ಅರ್ಚಕರು ಗರ್ಭಗುಡಿಯ ಬಾಗಿಲನ್ನು ಹಾಕಿ ಹೊರ ಬರುತ್ತಾರೆ. ಪೂಜೆ ನಡೆಸುವವರು ಬಂದು ಅರ್ಚಕರಿಗೆ ಒಪ್ಪಿಗೆ ನೀಡುವ ತನಕವೂ ಆ ಬಾಗಿಲನ್ನು ತೆರೆಯುವಂತಿಲ್ಲ. ನಂತರ ಬಾಗಿಲು ತೆರೆದು ದೇವರಿಗೆ ಕಾಯಿ ಇಟ್ಟು ಹೇಳಿಕೆ ಮಾಡಿಕೊಂಡೇ ಅಲಂಕಾರ ಪ್ರಾರಂಭಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.