ಬೆಂಗಳೂರು: ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿ, ಜೆಡಿಎಸ್ ಷಡ್ಯಂತ್ರ ರೂಪಿಸುತ್ತಿದೆ. ಆದರೆ, ಈ ಯೋಜನೆಗಳನ್ನು ನಿಲ್ಲಿಸುವುದು ವಿಪಕ್ಷದವರ ಹಣೆಯಲ್ಲಿ ಬರೆದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ಹೇಳಿದರು.
‘ಉಪ ಚುನಾವಣೆ ಬಳಿಕ ಗೃಹಲಕ್ಷ್ಮಿ ಯೋಜನೆ ನಿಲ್ಲಲಿದೆ’ ಎಂಬ ಎಚ್.ಡಿ. ದೇವೇಗೌಡರ ಹೇಳಿಕೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿರುವುದರ ಬಗ್ಗೆ ಜನರು ಜಾಗೃತರಾಗಿರಬೇಕೆಂದು ದೇವೇಗೌಡರು ಸಂದೇಶ ನೀಡಿದ್ದಾರೆ’ ಎಂದರು.
‘ಗ್ಯಾರಂಟಿ ಯೋಜನೆಗಳು ಮತ್ತು ಆಡಳಿತವನ್ನು ರಾಜ್ಯದ ಜನರು ಒಪ್ಪಿದ್ದಾರೆ. ಹೀಗಾಗಿ, ಉಪ ಚುನಾವಣೆ ನಡೆಯಲಿರುವ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಮೊಳಗಿಸಲಿದೆ’ ಎಂದರು.
ಯಾರೋ ದಾರಿ ತಪ್ಪಿಸಿದ್ದಾರೆ: ‘ಅಬಕಾರಿ ಇಲಾಖೆಯಲ್ಲಿ ₹ 700 ಕೋಟಿ ವಸೂಲಿ ಬಗ್ಗೆ ಪ್ರಧಾನಿ ಮಾಡಿರುವುದು ಸುಳ್ಳು ಆರೋಪ. ಅವರನ್ನು ಯಾರೋ ದಾರಿ ತಪ್ಪಿಸಿದ್ದಾರೆ. ಈ ಆರೋಪ ಸಾಬೀತುಪಡಿಸಿದರೆ ರಾಜಕೀಯ ತ್ಯಜಿಸುವುದಾಗಿ ಮುಖ್ಯಮಂತ್ರಿ ಬಹಿರಂಗ ಸವಾಲು ಹಾಕಿದ್ದಾರೆ. ಇದಕ್ಕಿಂತ ಬೇರೇನು ಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.