ADVERTISEMENT

ಹೈಕಮಾಂಡ್‌ ಆಗಿಂದಾಗ್ಗೆ ವರದಿ ತರಿಸಿಕೊಳ್ಳುತ್ತದೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:58 IST
Last Updated 5 ಅಕ್ಟೋಬರ್ 2024, 15:58 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಹೈಕಮಾಂಡ್‌ ಆಗಿಂದಾಗ್ಗೆ ವರದಿ ತರಿಸಿಕೊಳ್ಳುತ್ತದೆ. ಸುಮ್ಮನೆ ಕೂರುವುದಿಲ್ಲ. ನಾವು ವರದಿ ಕಳುಹಿಸಲಿದ್ದು, ಇದಕ್ಕಾಗಿ ಪ್ರತ್ಯೇಕ ತಂಡ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸಚಿವ ಸತೀಶ ಜಾರಕಿಹೊಳಿಯವರಿಂದ ಖರ್ಗೆ ಭೇಟಿ, ಮುಖ್ಯಮಂತ್ರಿ ಬದಲಾವಣೆ ವದಂತಿ ಕುರಿತ ಪ್ರಶ್ನೆಗೆ ಅವರು, ‘ನಮ್ಮ (ಕಾಂಗ್ರೆಸ್) ನಾಯಕರು ನಮ್ಮ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನಲ್ಲದೆ ಇನ್ಯಾರನ್ನು ಭೇಟಿ ಮಾಡಬೇಕು. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ’ ಎಂದು ಪುನರುಚ್ಚರಿಸಿದರು.

‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ರಾಜ್ಯಕ್ಕೆ ಬರುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ದೆಹಲಿಗೆ ಹೋಗುವ ಉದ್ದೇಶವೂ ಇಲ್ಲ’ ಎಂದರು.

ADVERTISEMENT

‘ಗುಪ್ತ ಸಭೆ ಮಾಡಿ, ದೆಹಲಿಗೆ ಭೇಟಿ ನೀಡುವುದು ಯಾವ ಸಂದೇಶ ರವಾನಿಸುತ್ತದೆ’ ಎಂದು ಕೇಳಿದಾಗ, ‘ಹೈಕಮಾಂಡ್ ನಾಯಕರನ್ನು ಸಚಿವರು, ಶಾಸಕರು ಭೇಟಿ ಮಾಡುವುದು ಸ್ವಾಭಾವಿಕ‘ ಎಂದು ಹೇಳಿದರು. 

‘ಜಾತಿ ಗಣತಿ: ಪಕ್ಷದ ನೀತಿ ಮುಖ್ಯ’
‘ಜಾತಿ ಗಣತಿ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯವೇ ಬೇರೆ, ಪಕ್ಷದ ಅಧ್ಯಕ್ಷನಾಗಿ‌ ಅಭಿಪ್ರಾಯವೇ ಬೇರೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ‌ಮುಂದಿನ ಸಚಿವ ಸಂಪುಟದಲ್ಲಿ ಜಾತಿ ಗಣತಿ ವಿಚಾರ ಚರ್ಚೆ ನಡೆಸುವ ಬಗ್ಗೆ ಕೇಳಿದಾಗ, ‘ಈ ವಿಚಾರದಲ್ಲಿ ಪಕ್ಷದ ನೀತಿಯಂತೆ ನಾವು ನಡೆಯಬೇಕಿದೆ. ಪಕ್ಷದ ನೀತಿಯನ್ನು ನಾನೊಬ್ಬನೇ ತೀರ್ಮಾನಿಸಲು ಆಗುವುದಿಲ್ಲ. ಇಡೀ ಪಕ್ಷ ಹಾಗೂ ವರಿಷ್ಠರು ತೀರ್ಮಾನಿಸುತ್ತಾರೆ. ರಾಹುಲ್ ಗಾಂಧಿ ನಮಗೆ ನಿರ್ದಿಷ್ಟ ನಿರ್ದೇಶನ ನೀಡಿದ್ದು, ಪಕ್ಷದ ಪ್ರಣಾಳಿಕೆ ಯಲ್ಲಿ ಕೆಲವು ವಿಚಾರ ಪ್ರಸ್ತಾಪವಾಗಿವೆ. ಎಲ್ಲವನ್ನೂ ಗಮನದಲ್ಲಿಟ್ಟು ತೀರ್ಮಾನಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.